ಪಂಜಾಬ್: ರವಿದಾಸ್ ದೇವಾಲಯ ಧ್ವಂಸ: ಪ್ರತಿಭಟನಕಾರರಿಂದ ಮೋದಿ ಪ್ರತಿಕೃತಿ ದಹನ

Update: 2019-09-08 16:47 GMT

ಫಗ್ವಾರಾ (ಪಂಜಾಬ್), ಸೆ. 8: ದಿಲ್ಲಿಯಲ್ಲಿ ಕಳೆದ ತಿಂಗಳು ರವಿದಾಸ್ ದೇವಾಲಯ ನಾಶಗೊಳಿಸಿದ ವಿರುದ್ಧ ದಲಿತ ಹೋರಾಟಗಾರರು ಪಂಜಾಬ್ನ ಫಗ್ವಾರಾ ಜಿಲ್ಲೆಯಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು. ಉಪವಾಸ ಪ್ರತಿಭಟನೆ ಹಾಗೂ ಧರಣಿಯ ಕೊನೆ ದಿನವಾದ ಶನಿವಾರ ಸ್ಥಳೀಯ ತಾಲೂಕು ಸಂಕೀರ್ಣದ ಎದುರು ಪ್ರತಿಭಟನಕಾರರು ಪ್ರತಿಭಟನೆ ನಡೆಸಿ, ದಿಲ್ಲಿಯ ತುಘ್ಲಕಾಬಾದ್ ಪ್ರದೇಶದಲ್ಲಿ ರವಿದಾಸ್ ದೇವಾಲಯ ಮರು ನಿರ್ಮಿಸುವಂತೆ ಆಗ್ರಹಿಸಿದರು. ‘ಬಹುಜನ ಸಮಾಜ್ ಫ್ರಂಟ್ ಪಂಜಾಬ್’ ಸಂಘಟನೆ ಅಡಿ ಪ್ರತಿಭಟನೆ ನಡೆಸಿದ ಹೋರಾಟಗಾರರು, ಬಿಜೆಪಿ ನೇತೃತ್ವದ ಎನ್ಡಿಎ ಸರಕಾರ, ಆರೆಸ್ಸೆಸ್ ಹಾಗೂ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು. ದೇವಾಲಯ ನಾಶದ ವಿರುದ್ಧ ಆಗಸ್ಟ್ 21ರಂದು ದಿಲ್ಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಬಂಧಿಸಲಾದ 96 ಮಂದಿಯನ್ನು ಬಿಡುಗಡೆಗೊಳಿಸುವಂತೆ ಪ್ರತಿಭಟನಕಾರರು ಆಗ್ರಹಿಸಿದರು. 6 ದಿನಗಳ ಪ್ರತಿಭಟನೆಗೆ ‘ಶ್ರೀ ಗುರು ರವಿದಾಸ್ ಸಾಧು ಸಂಪ್ರದಾಯಿ ಸೊಸೈಟಿ’ ಕರೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News