ರೈತರನ್ನು ಉಗ್ರರೆಂದು ಬಿಂಬಿಸುತ್ತಿರುವ ಭಾರತ ಸೇನೆ: ಪಾಕ್ ಆರೋಪ

Update: 2019-09-08 17:23 GMT

  ಇಸ್ಲಾಮಾಬಾದ್,ಸೆ.8: ಪ್ರಮಾದವಶಾತ್ ಗಡಿನಿಯಂತ್ರಣ ರೇಖೆ ದಾಟಿದ್ದ ಪಾಕಿಸ್ತಾನದ ಇಬ್ಬರು ರೈತರನ್ನು ಭಯೋತ್ಪಾದಕ ಸಂಘಟನೆಯೊಂದರ ಸದಸ್ಯರೆಂಬುದಾಗಿ ಭಾರತದ ಸೇನೆಯು ತಪ್ಪಾಗಿ ಬಿಂಬಿಸುತ್ತಿರುವುದಾಗಿ ಪಾಕ್ ಸೇನೆ ಶನಿವಾರ ಆಪಾದಿಸಿದೆ.

  ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಭಾರತ ಸರಕಾರ ಆಗಸ್ಟ್ 5ರಂದು ರದ್ದುಪಡಿಸಿದ ಬಳಿಕ ಪಾಕಿಸ್ತಾನವು ಕಾಶ್ಮೀರ ಕಣಿವೆಗೆ ಹಲವಾರು ಭಯೋತ್ಪಾದಕರನ್ನು ನುಗ್ಗಿಸಲು ಯತ್ನಿಸುತ್ತಿದೆ ಎಂದು ಭಾರತೀಯ ಸೇನೆಯ 15 ಕಾರ್ಪ್ಸ್ ಪಡೆಯ ಲೆ.ಜನರಲ್ ಕೆ.ಜೆ.ಎಸ್.ದಿಲ್ಲೋನ್ ಸೆ.4ರಂದು ಶ್ರೀನಗರದಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ಆರೋಪಿಸಿದ್ದರು.

  ಕಾಶ್ಮೀರದೊಳಗೆ ನುಸುಳಲು ವಿಫಲ ಯತ್ನ ನಡೆಸಿದ ಲಷ್ಕರೆ ತಯ್ಯೆಬಾ ಗುಂಪಿನ ಇಬ್ಬರು ಉಗ್ರರನ್ನು ನಾವು ಬಂಧಿಸಿದ್ದೇವೆ ಎಂದು ಅವರು ತಿಳಿಸಿದ್ದರು.

ಬಂಧಿತರು ವಿಚಾರಣೆಯ ವೇಳೆ ತಮ್ಮನ್ನು ರಾವಲ್ಪಿಂಡಿಯ ನಿವಾಸಿಗಳಾದ ಮುಹಮ್ಮದ್ ಖಲೀಲ್ ಹಾಗೂ ಮುಹಮ್ಮದ್ ನಝೀಮ್ ಎಂಬುದಾಗಿ ಗುರುತಿಸಿಕೊಂಡಿದ್ದಾರೆಂದು ಹೇಳಿರುವ ವಿಡಿಯೋವನ್ನು ಭಾರತೀಯ ಸೇನೆ ಬಿಡುಗಡೆಗೊಳಿಸಿತ್ತು.

  ಆದರೆ ಪಾಕ್ ಸೇನೆಯು ಭಾರತದ ಆರೋಪವನ್ನು ಅಲ್ಲಗಳೆದಿದೆ. ಎಲ್‌ಓಸಿಯಲ್ಲಿ ಬಂಧಿತರಾದ ಖಲೀಲ್ (30) ಹಾಗೂ ನಝೀಮ್ (21), ಪಾಕ್ ಆಕ್ರಮಿತ ಕಾಶ್ಮೀರದ ರೈತರಾಗಿದ್ದು ಅವರು ಹುಲ್ಲು ಕತ್ತರಿಸಲು ಹೋಗಿದ್ದಾಗ, ಪ್ರಮಾದವಶಾತ್ ಹಾಜಿಪುರ್ ಬಳಿ ಗಡಿನಿಯಂತ್ರಣ ರೇಖೆಯನ್ನು ದಾಟಿದ್ದಾರೆಂದು ಪಾಕ್ ಸೇನೆ ಹೇಳಿಕೆಯೊಂದರಲ್ಲಿ ತಿಳಿಸಿದೆ.

  ಭಾರತ ಹಾಗೂ ಪಾಕ್ ಸೇನೆಗಳ ನಡುವೆ ಪ್ರತಿ ವಾರಕ್ಕೊಮ್ಮೆ ನಡೆಯುವ ಹಾಟ್‌ಲೈನ್ ಸಂಭಾಷಣೆಯಲ್ಲಿ ಇವರಿಬ್ಬರ ಬಂಧನದ ವಿಷಯದ ಬಗ್ಗೆ ಚರ್ಚಿಸಲಾಗಿತ್ತು. ಈ ಮಧ್ಯೆ ಕೆಲವು ಭಾರತೀಯ ಮಾಧ್ಯಮಗಳು, ಬಂಧಿತರು ನಿಷೇಧಿತ ಉಗ್ರಗಾಮಿ ಗುಂಪೊಂದರ ಸದಸ್ಯರೆಂದು ಆರೋಪಿಸಿದ್ದವು.

  ಉಭಯದೇಶಗಳ ನಡುವೆ ಮಾಹಿತಿ ಹಾಗೂ ವಾಸ್ತವಾಂಶಗಳನ್ನು ವಿನಿಮಯ ಮಾಡಿಕೊಂಡಿರುವ ಹೊರತಾಗಿಯೂ ಭಾರತದ ಕೆಲವು ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಹರಡುತ್ತಿರುವುದಾಗಿ ಪಾಕ್ ಕಳವಳ ವ್ಯಕ್ತಪಡಿಸಿತ್ತು.

 ಬಂಧಿತರಿಗೆ ಸಂಬಂಧಿಸಿ ಭಾರತವು ಕಾನೂನು ಪ್ರಕ್ರಿಯೆಯನ್ನು ನಡೆಸುತ್ತಿದ್ದು, ಅದರ ಫಲಿತಾಂಶವನ್ನು ಪಾಕ್ ಅಧಿಕಾರಿಗಳ ಜೊತೆ ಹಂಚಿಕೊಳ್ಳಲಾಗುವುದೆಂದು ಭಾರತ ಸೇನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News