ಪಾಕ್ ಸೇನೆಯಿಂದ ಬಲೂಚ್ ಮಹಿಳೆ, ನಾಲ್ವರು ಪುತ್ರರ ಅಪಹರಣ?

Update: 2019-09-08 17:47 GMT

 ಇಸ್ಲಾಮಬಾದ್,ಸೆ.8: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತದಲ್ಲಿ ಬಸ್ಸೊಂದರಲ್ಲಿ ಪ್ರಯಾಣಿಸುತ್ತಿದ್ದ ಓರ್ವ ಮಹಿಳೆ ಹಾಗೂ ಆಕೆಯ ನಾಲ್ವರು ಪುತ್ರರನ್ನು ಪಾಕ್ ಸೇನೆಯು ಇತ್ತೀಚೆಗೆ ಅಪಹರಿಸಿದೆಯೆಂದು ಬಲೂಚ್ ರಿಪಬ್ಲಿಕನ್ ಪಾರ್ಟಿಯ ಶೇರ್ ಮುಹಮ್ಮದ್ ಭುಗ್ತಿ ಅವರ ವಕ್ತಾರರೊಬ್ಬರು ರವಿವಾರ ಟ್ವೀಟ್ ಮಾಡಿದ್ದಾರೆ.

 ಬಲೂಚ್ ಪ್ರಾಂತದ ಮಹಿಳೆ ಸಲೀಮಾ ಬಂಗೂಲ್‌ಝಾಯ್ ಹಾಗೂ ಆಕೆಯ ನಾಲ್ವರು ಮಕ್ಕಳನ್ನು ಪಾಕ್ ಸಶಸ್ತ್ರ ಪಡೆಗಳ ಸೈನಿಕರು, ಶುಕ್ರವಾರ ಸಂಜೆ ಮಂಗ್‌ಚಾರ್ ಪ್ರಾಂತ್ಯದಲ್ಲಿ ಅಪಹರಿಸಿದ್ದರೆಂದು ಅವರು ಹೇಳಿದ್ದಾರೆ.

ಅಪಹೃತರು, ಜೊಹಾನ್ ಪ್ರದೇಶದಲ್ಲಿ ನಡೆಯಲಿದ್ದ ಬುಡಕಟ್ಟುಪಂಗಡವೊಂದರ ಸಭೆಯಲ್ಲಿ ಪಾಲ್ಗೊಳಲು ತೆರಳುತ್ತಿದ್ದರೆಂದು ಮೂಲಗಳು ತಿಳಿಸಿವೆ. ಅಪಹೃತ ಬಲೂಚ್ ಮಹಿಳೆಯು ಬಲೂಚಿಸ್ತಾನದ ಬಂಗುಲ್‌ಝಾಯ್ ಪಂಗಡಕ್ಕೆ ಸೇರಿದವರಾಗಿದ್ದಾರೆ.

    ಪಾಕ್ ಸರಕಾರವು ನೇಮಿಸಿರುವ ಬಲವಂತದ ನಾಪತ್ತೆ ಪ್ರಕರಣಗಳ ಕುರಿತಾದ ತನಿಖಾ ಆಯೋಗವು ಪ್ರಕಟಿಸಿರುವ ಅಂಕಿಅಂಶಗಳ ಪ್ರಕಾರ 2014ರಿಂದೀಚೆಗೆ ಪಾಕಿಸ್ತಾನದಲ್ಲಿ 5 ಸಾವಿರ ಬಲವಂತದ ನಾಪತ್ತೆ ಪ್ರಕರಣಗಳು ವರದಿಯಾಗಿವೆ. ಅವುಗಳಲ್ಲಿ ಹೆಚ್ಚಿನವು ಬಗೆಹರಿದಿಲ್ಲವೆಂದು ಅದು ಹೇಳಿದೆ.

   ಆದರೆ ಕೆಲವು ಸ್ಥಳೀಯ ಸ್ವಾಯತ್ತ ಹಾಗೂ ಅಂತಾರಾಷ್ಟ್ರೀಯ ಮಾನವಹಕ್ಕುಗಳ ಸಂಘಟನೆಗಳು ಈ ಸಂಖ್ಯೆಯು ಇನ್ನೂ ಅಧಿಕವೆಂದು ಹೇಳುತ್ತಿವೆ. ಬಲೂಚಿಸ್ತಾನದಿಂದ ಸುಮಾರು 20 ಸಾವಿರ ಮಂದಿ ಅಪಹೃತರಾಗಿದ್ದು, ಅವರಲ್ಲಿ 2500ಕ್ಕೂ ಅಧಿಕ ಮಂದಿಯ ಶವಗಳು ಬುಲೆಟ್‌ನಿಂದ ಛಿದ್ರಗೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದವು ಎಂದು ಅವು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News