×
Ad

ಯಾವುದೇ ಅಧಿಕಾರಿ ತಪ್ಪು ಮಾಡಿಲ್ಲ, ಅವರ ಬಂಧನ ನಾನು ಬಯಸುವುದಿಲ್ಲ: ಚಿದಂಬರಂ

Update: 2019-09-09 19:38 IST

ಹೊಸದಿಲ್ಲಿ,ಸೆ.9: ಐಎನ್‌ಎಕ್ಸ್ ಮೀಡಿಯಾ ಪ್ರಕರಣದೊಂದಿಗೆ ಗುರುತಿಸಿಕೊಂಡಿರುವ ಅಧಿಕಾರಿಗಳು ಯಾವುದೇ ತಪ್ಪು ಮಾಡಿಲ್ಲ ಮತ್ತು ಅವರ ಬಂಧನವನ್ನು ತಾನು ಬಯಸುವುದಿಲ್ಲ ಎಂದು ಮಾಜಿ ವಿತ್ತಸಚಿವ ಪಿ.ಚಿದಂಬರಂ ಹೇಳಿದ್ದಾರೆ.

ಸದ್ಯ ತಿಹಾರ್ ಜೈಲಿನಲ್ಲಿ ಬಂಧನದಲ್ಲಿರುವ ಚಿದು,ಈ ಬಗ್ಗೆ ಟ್ವೀಟಿಸುವಂತೆ ತಾನು ತನ್ನ ಕುಟುಂಬ ಸದಸ್ಯರಿಗೆ ಸೂಚಿಸಿದ್ದೆ ಎಂದಿದ್ದಾರೆ.

‘ಐಎನ್‌ಎಕ್ಸ್ ಮೀಡಿಯಾದ ದಾಖಲೆಗಳನ್ನು ಸಂಸ್ಕರಿಸಿ ನಿಮಗೆ ಶಿಫಾರಸು ಮಾಡಿದ್ದ ಡಝನ್ ಅಧಿಕಾರಿಗಳನ್ನು ಬಂಧಿಸಿಲ್ಲ,ಆದರೆ ನಿಮ್ಮನ್ನೇಕೆ ಬಂಧಿಸಲಾಗಿದೆ? ಅಂತಿಮ ಸಹಿಯನ್ನು ನೀವು ಹಾಕಿದ್ದೀರಿ ಎಂಬ ಕಾರಣಕ್ಕಾಗಿಯೇ ಎಂದು ಜನರು ನನ್ನನ್ನು ಪ್ರಶ್ನಿಸಿದ್ದಾರೆ. ಆದರೆ ಇದಕ್ಕೆ ನನ್ನ ಬಳಿ ಉತ್ತರವಿಲ್ಲ” ಎಂದು ಚಿದಂಬರಂ ಅವರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹೇಳಲಾಗಿದೆ.

 ಐಎನ್‌ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ಸಿಬಿಐ ನ್ಯಾಯಾಲಯವು ಚಿದಂಬರಂ ಅವರಿಗೆ ಸೆ.19ರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ.

 2007ರಲ್ಲಿ ಆಗಿನ ಯುಪಿಎ ಸರಕಾರದಲ್ಲಿ ಚಿದಂಬರಂ ಅವರು ವಿತ್ತ ಸಚಿವರಾಗಿದ್ದಾಗ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯಿಂದ ಐಎನ್‌ಎಕ್ಸ್ ಮೀಡಿಯಾಕ್ಕೆ ವಿದೇಶಿ ನೇರ ಹೂಡಿಕೆ ಅನುಮತಿ ನೀಡುವಲ್ಲಿ ಅವ್ಯವಹಾರಗಳು ನಡೆದಿದ್ದವು. ಪುತ್ರ ಕಾರ್ತಿಯ ಒತ್ತಾಸೆಯಿಂದ ಚಿದಂಬರಂ ಇದಕ್ಕೆ ಅನುಮತಿ ನೀಡಿದ್ದರು. ಕೇವಲ ನಾಲ್ಕು ಕೋ.ರೂ.ಗಳಿಗೆ ಅನುಮತಿಯಿದ್ದರೂ 305 ಕೋ.ರೂ.ಗಳ ವಿದೇಶಿ ನೆರವು ಪಡೆದುಕೊಂಡಿದ್ದಕ್ಕಾಗಿ ದಂಡನಾ ಕ್ರಮಗಳಿಂದ ತಪ್ಪಿಸಿಕೊಳ್ಳಲು ಕಂಪನಿಗೆ ನೆರವಾಗಲು ಕಾರ್ತಿ ಚಿದಂಬರಂ 10 ಲ.ರೂ.ಗಳ ಕಮಿಷನ್ ಪಡೆದಿದ್ದರು ಎಂದು ಸಿಬಿಐ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News