ಐಎಎಸ್ ಅಧಿಕಾರಿ ವಿರುದ್ಧ ಶಾಸಕರಿಂದ ವಿವಾದಾತ್ಮಕ ಹೇಳಿಕೆ: ಮಠಂದೂರು ವಿರುದ್ಧ ಎಫ್‌ಐಆರ್ ದಾಖಲಿಸಲು ಕಾಂಗ್ರೆಸ್ ಒತ್ತಾಯ

Update: 2019-09-10 12:51 GMT

ಮಂಗಳೂರು, ಸೆ.10: ‘ಸಸಿಕಾಂತ್ ಸೆಂಥಿಲ್ ದೇಶದ್ರೋಹಿ’ ಎಂದು ಪುತ್ತೂರು ಶಾಸಕ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ್ ಮಠಂದೂರು ಯಾವುದೇ ದಾಖಲೆಯಿಲ್ಲದೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದ್ದಾರೆ. ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ, ಬಂಧಿಸಬೇಕೆಂದು ಒತ್ತಾಯಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಮುಖಂಡರು ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಅವರಿಗೆ ದೂರು ನೀಡಿದ್ದಾರೆ.

ಈ ಸಂದರ್ಭ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಜಿಲ್ಲೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ, ಸ್ವ-ಇಚ್ಛೆಯಿಂದ ರಾಜೀನಾಮೆ ನೀಡಿರುವುದಾಗಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಅವರೇ ಹೇಳಿಕೊಂಡಿದ್ದರು. ಉತ್ತಮ ಅಧಿಕಾರಿಗೆ ‘ದೇಶದ್ರೋಹಿ’ ಶಬ್ದ ಬಳಸುವ ಮೂಲಕ ಜಿಲ್ಲೆಯ ಜನತೆಗೆ ನೋವುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸೆಂಥಿಲ್ ಪ್ರಾಮಾಣಿಕ, ನಿಷ್ಠಾವಂತ ಹಾಗೂ ದಕ್ಷ ಅಧಿಕಾರಿಯಾಗಿ ಸುಮಾರು ಎರಡು ವರ್ಷಗಳ ಕಾಲ ಜಿಲ್ಲೆಯ ಪ್ರಮುಖ ಸಮಸ್ಯೆಗಳಿಗೆ ಸ್ಪಂದಿಸಿ ಜನಮನ್ನಣೆ ಗಳಿಸಿದ್ದ ಐಎಎಸ್ ಅಧಿಕಾರಿಗೆ ಮಾನಸಿಕ ಹಿಂಸೆ ನೀಡುವ ಹಾಗೂ ಜನರಿಗೆ ‘ದೇಶದ್ರೋಹಿ’ ಎಂಬ ತಪ್ಪು ಸಂದೇಶ ನೀಡಿರುವುದು ಸಮಾಜದಲ್ಲಿನ ಸಾಮರಸ್ಯ ಮತ್ತು ಅಸಹಿಷ್ಣುತೆಗೆ ಕಾರಣವಾಗಿದೆ ಎಂದರು.

ಶಾಸಕ ಸಂಜೀವ ಮಠಂದೂರು ದಾಖಲೆ ರಹಿತವಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಭಾರತೀಯ ದಂಡ ಸಂಹಿತೆ, ದೇಶದ ಭದ್ರತೆ, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಹಕ್ಕಿನ ವಿರುದ್ಧವಾದ ಹೇಳಿಕೆಯು ಕಾನೂನಿನ ಅಡಿಯಲ್ಲಿ ಗುರುತರ ಅಪರಾಧವಾಗಿದೆ ಎಂದು ಹೇಳಿದರು.

ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯ

ಐಎಎಸ್ ಅಧಿಕಾರಿಗಳು ಸೇವೆ ಸಲ್ಲಿಸುವ ಹಾಗೂ ಇತರ ಅಧಿಕಾರಿಗಳಿಗೆ ಸಾಮಾಜಿಕ ಸ್ಪಂದನೆಗೆ ಮತ್ತು ಕರ್ತವ್ಯ ನಿರ್ವಹಣೆಯಲ್ಲಿ ಮಾನಸಿಕ ಸ್ಥೈರ್ಯ ಕುಗ್ಗಿಸುವ ತಂತ್ರ ಇದಾಗಿದೆ. ಅಲ್ಲದೆ, ವ್ಯಕ್ತಿ ಸ್ವಾತಂತ್ರ ಕಸಿದುಕೊಂಡಂತಾಗಿದೆ. ಇದೇ ರೀತಿ ಕಳೆದ ಎರಡು ದಿನಗಳಿಂದ ಶಾಸಕ ಮಠಂದೂರು ನೇತೃತ್ವದಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಅಸಂಬದ್ಧ ಹೇಳಿಕೆಗಳನ್ನು ಪ್ರಕಟಿಸಿದ್ದಾರೆ. ಇಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಒತ್ತಾಯಿಸಿದರು.

ಶಾಸಕರಾದ ಸಂಜೀವ ಮಠಂದೂರು, ಭರತ್ ಶೆಟ್ಟಿ, ಬಿಜೆಪಿ ಮುಖಂಡರಾದ ಹರಿಕೃಷ್ಣ ಬಂಟ್ವಾಳ, ರವಿಶಂಕರ್ ಮಿಜಾರು, ಕಿಶೋರ್ ಕುಮಾರ್ ರೈ, ಸತೀಶ್ ಪ್ರಭು ವಿರುದ್ಧ ಕೇಸು ದಾಖಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿದರು.

ಈ ಸಂದರ್ಭ ದ.ಕ. ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಹರೀಶ್‌ ಕುಮಾರ್, ಮುಖಂಡರಾದ ಇಬ್ರಾಹೀಂ ಕೊಡಿಜಾಲ್, ಪಿ.ವಿ.ಮೋಹನ್, ಸದಾಶಿವ ಉಳ್ಳಾಲ, ಶಾಹುಲ್ ಹಮೀದ್, ಸಂತೋಷ್ ಕುಮಾರ್ ಶೆಟ್ಟಿ, ಧನಂಜಯ ಅಡಪಂಗಾಯ, ಖಾಲಿದ್ ಉಜಿರೆ, ಪಿಯೂಶ್ ಮೊಂತೆರೊ, ಅಡ್ವೊಕೇಟ್ ಚಂದ್ರಶೇಖರ್ ಪೂಜಾರಿ, ಸಿ.ಎಂ.ಮುಸ್ತಫಾ, ಆಶಿತ್ ಪೆರೆರಾ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News