‘ದೇಶದ್ರೋಹ’ ಬಿಜೆಪಿಯ ಉದಾರ ಕೊಡುಗೆ: ಎಸ್‌ಡಿಪಿಐ
ಮಂಗಳೂರು, ಸೆ.10: ದ.ಕ. ಜಿಲ್ಲಾಧಿಕಾರಿಯಾಗಿದ್ದ ನಿಷ್ಠಾವಂತ, ದಕ್ಷ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ವಿರುದ್ಧ ಕೀಳುಮಟ್ಟದ ಮಾತುಗಳನ್ನು ಆಡಿದ ಬಿಜೆಪಿ ಶಾಸಕ ಸಂಜೀವ ಮಠಂದೂರು ಮತ್ತು ಸಂಸದ ಅನಂತಕುಮಾರ್ ಹೆಗಡೆ ಮುಂತಾದ ಬಿಜೆಪಿ ನಾಯಕರು ಮನೋವಿಕೃತಿಯಿಂದ ಬಳಲುತ್ತಿದ್ದಾರೆ. ‘ದೇಶದ್ರೋಹ’ ಬಿಜೆಪಿಯ ಉದಾರ ಕೊಡುಗೆಯಾಗಿದೆ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದ್ದಾರೆ.
ದೇಶದಲ್ಲಿ ನಡೆಯುತ್ತಿರುವ ಅವ್ಯಾಹತ ಹಿಂಸೆ, ಮಾನವ ಹ್ಕುಗಳ ಉಲ್ಲಂಘನೆ, ಸರಕಾರವನ್ನು ಟೀಕಿಸುವವರ ಮೇಲೆ ದೌರ್ಜನ್ಯ, ಸಂವಿಧಾನದ ಕಡೆಗಣನೆ, ಸರಕಾರಿ ಸ್ವಾಯತ್ತ ಸಂಸ್ಥೆಗಳ ಮೇಲೆ ದಬ್ಬಾಳಿಕೆ, ನೆಲಕಚ್ಚಿದ ಆರ್ಥಿಕತೆ, ವಾಕ್‌ಸ್ವಾತಂತ್ರ್ಯ ಹರಣ, ಅಘೋಷಿತ ತುರ್ತು ಪರಿಸ್ಥಿತಿಗಳನ್ನೆಲ್ಲ ಪ್ರತ್ಯಕ್ಷ ಕಂಡು ರೋಸಿಹೋದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ತನ್ನ ಹುದ್ದೆ ತ್ಯಜಿಸಿ ಪ್ರತಿಭಟನಾತ್ಮಕವಾಗಿ ರಾಜೀನಾಮೆ ನೀಡಿದ್ದಾರೆ ಎಂದರು.
ಫ್ಯಾಸಿಸ್ಟ್ ಮತ್ತು ಮನುವಾದ ಸಿದ್ಧಾಂತದ ಹಾದಿಯಲ್ಲಿ ದೇಶವನ್ನು ವಿಭಜಿಸುತ್ತಾ ಉಗ್ರವಾದ ರಾಷ್ಟ್ರೀಯವಾದವೆಂಬ ವಿಕಲ್ಪವನ್ನು ಬಿತ್ತುತ್ತಿರುವ ಬಿಜೆಪಿ ಮತ್ತು ಸಂಘಪರಿವಾರದವರಿಗೆ ಸೆಂಥಿಲ್‌ನಡೆ ಖಂಡಿತ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.