ಮೋಟಾರು ವಾಹನ ಕಾಯ್ದೆಯಡಿ ಭಾರೀ ದಂಡ ಹೇರಿಕೆಯು ಕೇಂದ್ರದಿಂದ ಜನಸಾಮಾನ್ಯರ ಮೇಲಿನ ಯುದ್ಧ: ಮಾಜಿ ಸಚಿವ ಖಾದರ್
ಮಂಗಳೂರು, ಸೆ.10: ಕೇಂದ್ರ ಸರಕಾರವು ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಾಡಿ ಉಲ್ಲಂಘನೆ ಪ್ರಕರಣಗಳಿಗೆ ಭಾರೀ ದಂಡ ಹಾಕುವ ಮೂಲಕ ಜನಸಾಮಾನ್ಯರ ಮೇಲೆ ಯುದ್ಧ ನಡೆಸುತ್ತಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಯು.ಟಿ.ಖಾದರ್ ಆಕ್ಷೇಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬರುವ ಸಂದರ್ಭ ಪಾಕಿಸ್ತಾನದ ವಿರುದ್ಧ ಯುದ್ಧ ನಡೆದು ಹದ್ದುಬಸ್ತಿನಲ್ಲಿಟ್ಟು, ನುಸುಳುಕೋರರಿಗೆ ತಕ್ಕ ಶಾಸ್ತಿ ಮಾಡುವ ಭಾವನೆ ಇತ್ತು. ಆದರೆ ಸರಕಾರ ಆ ಕಾರ್ಯ ಮಾಡದೆ ಮೋಟಾರು ವಾಹನ ಕಾಯ್ದೆಯಡಿ ಭಾರೀ ತಂಡವನ್ನು ಹೇರುವ ಮೂಲಕ ಈಗಾಗಲೇ ಆರ್ಥಿಕ ಹಿಂಜರಿತದಿಂದ ಸಂಕಷ್ಟಕ್ಕೊಳಗಾಗಿರುವ ಜನಸಾಮಾನ್ಯರ ಮೇಲೆಯೇ ಯುದ್ಧ ನಡೆಸುತ್ತಿದೆ ಎಂದರು.
ಕೇವಲ ಪತ್ರಿಕೆ, ಚಾನೆಲ್‌ಗಳ ಮೂಲಕ ಹೇಳಿಕೆಗಳನ್ನು ನೀಡುವುದು ಪ್ರಧಾನಿ, ಗೃಹ ಸಚಿವರ ಕೆಲಸವಲ್ಲ. ಅಮೆರಿಕ, ದುಬೈನಲ್ಲಿನ ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂಘಿಸುವ ಪ್ರಕರಣಗಳಿಗೆ ವಿಧಿಸಲಾಗುವ ದಂಡವನ್ನು ನೋಡಿ ಇಲ್ಲಿಯೂ ಕ್ರಮ ಕೈಗೊಂಡಿರಬಹುದು. ಆದರೆ ಅಮೆರಿಕದ 1 ಡಾಲರ್ ಮೌಲ್ಯ 72 ರೂ. ವಿದೇಶದ ಕ್ರಮವನ್ನು ಇಲ್ಲಿ ತೆಗೆದುಕೊಳ್ಳುವುದಾದರೆ ಸ್ವದೇಶಿ ಎಂಬ ಗುಣಗಾನ ಮಾಡುವುದೇಕೆ? ಹಾಗಿದ್ದರೆ ಬಾಯಲ್ಲಿ ಮಾತ್ರ ಸ್ವದೇಶಿ, ಕೃತಿಯಲ್ಲಿ ವಿದೇಶಿಯೇ ? ಎಂದು ಅವರು ಪ್ರಶ್ನಿಸಿದರು.
ರಾಜ್ಯ ಸರಕಾರ ಈ ಕಾನೂನನ್ನು ಆರು ತಿಂಗಳು ಮುಂದೂಡಿ ನಿಯಮಗಳನ್ನು ಸರಿಪಡಿಸಿ, ಜನರಲ್ಲಿ ಜಾಗೃತಿ ಮೂಡಿಸಿ, ತೊಂದರೆಯನ್ನು ನಿವಾರಿಸಬೇಕು. ಇಲ್ಲವಾದಲ್ಲಿ ಈ ಕಾನೂನು ಸಾಮಾಜಿಕ ಸಮಸ್ಯೆಯಾಗಿ ದಂಡದ ಹಣ ಕಟ್ಟುವುದಕ್ಕಾಗಿ ಜನರನ್ನು ಅಪರಾಧ ಕೃತ್ಯಗಳಿಗೆ ಎಡೆ ಮಾಡಿಕೊಲಿದೆ ಎಂದು ಖಾದರ್ ಆರೋಪಿಸಿದರು.
ಕೇಂದ್ರ ಸರಕಾರ ಕಾನೂನು ರೂಪಿಸಲಿದರೆ, ರಾಜ್ಯಗಳು ನಿಯಮ ರಚಿಸುತ್ತಾರೆ. ಈಗಾಗಲೇ ಗೋವಾ ಸರಕಾರ ರಸ್ತೆ ಸರಿ ಮಾಡಿದ ಬಳಿಕ ಅದನ್ನು ಜಾರಿ ಮಾಡುವುದಾಗಿ ಹೇಳಿದೆ. ಕೇರಳ ಸೇರಿದಂತೆ ಇತರ ಕೆಲ ರಾಜ್ಯಗಳಲ್ಲೂ ಈ ಕ್ರಮ ಕೈಗೊಳ್ಳಲಾಗಿದೆ. ಕರ್ನಾಟಕ ರಾಜ್ಯವೂ ಈ ನಿಟ್ಟಿನಲ್ಲಿ ಮುಂದಾಗೇಕು ಎಂದು ಅವರು ಆಗ್ರಹಿಸಿದರು.
ಗೋಷ್ಠಿಯಲ್ಲಿ ಈಶ್ವರ ಉಳ್ಳಾಲ್, ಎಂ.ಎಸ್. ಮುಹಮ್ಮದ್, ದಿನೇಶ್ ರೈ, ಪ್ರಕಾಶ್ ಶೆಟ್ಟಿ, ಜಬ್ಬಾರ್ ಮೊದಲಾದವರು ಉಪಸ್ಥಿತರಿದ್ದರು.
'ಸಸಿಕಾಂತ್ ಸೆಂಥಿಲ್ ಮಾತು ಸಾಕ್ಷಿ ಸಹಿತ ಸಾಬೀತಾಗುತ್ತಿದೆ'
ನಿರ್ಗಮಿತ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಪಾಕಿಸ್ತಾನಕ್ಕೆ ಹೋಗಲಿ, ದೇಶದ್ರೋಹಿ, ನಕ್ಸಲೈಟ್ ಎಂದು ಕರೆಯುವ ಮೂಲಕ ಅವರ ಮಾತುಗಳನ್ನು ಬಿಜೆಪಿಯ ಜವಾಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತಿನಿಧಿಗಳು ಸಾಕ್ಷಿ ಸಹಿತ ಸಾಬೀತು ಪಡಿಸುತ್ತಿದ್ದಾರೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.
ಪಾಕಿಸ್ತಾನ ಇವರ ಸಂಬಂಧಿಕರ ಮನೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದ ಯು.ಟಿ. ಖಾದರ್, ಸೆಂಥಿಲ್‌ರ ಆತಂಕ ನಿಜವಾಗುತ್ತಿದೆ ಎಂದರು.
ಮಾಜಿ ಸಚಿವ ಡಿಕೆಶಿ ಅವರನ್ನು ಈಡಿ ಇಲಾಖೆ ವಶಕ್ಕೆ ಪಡೆದಿರುವ ಕುರಿತಂತೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರ ಬಂಧನಕ್ಕೆ ಸಿದ್ಧರಾಮಯ್ಯ ಕಾರಣ ಎಂಬ ಅಸಂಬದ್ಧ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಅವರನ್ನು ಈಗಾಗಲೇ ಜೋಕರ್ ಎಂದು ಕರೆಯಲಾಗುತ್ತಿದೆ. ಜಿಲ್ಲೆಯವರೂ ಜೋಕರ್ ಎಂದು ಕರೆಯುವಂತಾಗಬಾರದು. ಅವರು ತಮ್ಮ ಘನತೆಯನ್ನ ಕಾಪಾಡಿಕೊಳ್ಳಬೇಕು ಎಂದು ಖಾದರ್ ಹೇಳಿದು.