ಭಾರತದ ಪರಿವರ್ತನೆಯೇ ಬಿಜೆಪಿಯ ಮುಖ್ಯ ಗುರಿ: ನಳಿನ್ ಕುಮಾರ್ ಕಟೀಲ್

Update: 2019-09-10 14:30 GMT

ಉಡುಪಿ, ಸೆ.10: ರಾಜಕೀಯ ಮಾಡುವುದು ಮತ್ತು ಆಡಳಿತ ನಡೆಸುವುದು ಮಾತ್ರ ಬಿಜೆಪಿಯ ಉದ್ದೇಶವಲ್ಲ. ಭಾರತವನ್ನು ಪರಿವರ್ತನೆ ಮಾಡಿ ವಿಶ್ವಗುರುವನ್ನಾಗಿಸುವುದೇ ಬಿಜೆಪಿಯ ಮುಖ್ಯ ಗುರಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಉಡುಪಿ ಕಿದಿಯೂರು ಹೊಟೇಲಿನ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾದ ಅಭಿನಂದನಾ ಸಮಾರಂಭ ದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತಿದ್ದರು.

ಪಕ್ಷಕ್ಕಿಂತ ದೇಶ ಮುಖ್ಯ ಎಂಬ ವಿಚಾರಧಾರೆ ಬಿಜೆಪಿಯದ್ದು. ಆ ವಿಚಾರ ಧಾರೆಯಲ್ಲಿ ಎಂದೂ ರಾಜಿ ಮಾಡಿಕೊಳ್ಳುವುದಿಲ್ಲ. ಬಿಜೆಪಿಯಲ್ಲಿ ಪ್ರಜಾಪ್ರಭುತ್ವ ನೆಲೆಯಲ್ಲಿ ಅಧ್ಯಕ್ಷರುಗಳ ಆಯ್ಕೆ ನಡೆಸಲಾಗುತ್ತಿದೆ. ಸಾಮಾನ್ಯ ಕಾರ್ಯಕರ್ತ ಕೂಡ ಉನ್ನತ ಸ್ಥಾನ ಪಡೆಯಲು ಬಿಜೆಪಿ ಪಕ್ಷದಲ್ಲಿ ಮಾತ್ರ ಸಾಧ್ಯ. ಹಾಗಾಗಿ ಇಂದಿಗೂ ಬಿಜೆಪಿ ಇತರ ಪಕ್ಷಗಳಿಗಿಂತ ಭಿನ್ನವಾಗಿದೆ ಎಂದರು.

ಭಯ ಮತ್ತು ಎಚ್ಚರಿಕೆಯೊಂದಿಗೆ ರಾಜ್ಯಾಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿ ದ್ದೇನೆ. ಮೂರು ವರ್ಷಗಳ ನಂತರ ಎದುರಾಗುವ ವಿಧಾನಸಭಾ ಚುನಾವಣೆ ಯಲ್ಲಿ ಬಿಜೆಪಿಗೆ 150 ಸ್ಥಾನಗಳಲ್ಲಿ ಗೆಲುವು ತಂದು ಕೊಡುವ ಜವಾಬ್ದಾರಿ ನನ್ನ ಮೇಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಪಕ್ಷ ಕಟ್ಟುವ ಕಾರ್ಯ ಮಾಡಲಾಗುವುದು ಎಂದು ಅವರು ತಿಳಿಸಿದರು.

ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸಮರ್ಥ ಭಾರತ, ಶಕ್ತಿ ಶಾಲಿ ಭಾರತವನ್ನು ನಿರ್ಮಾಣ ಮಾಡುವುದು ಬಿಜೆಪಿ ಗುರಿಯಾಗಿದೆ. ಕೇಂದ್ರ ಸರಕಾರದ ಪ್ರತಿಯೊಂದು ಯೋಜನೆಗಳನ್ನು ಕೂಡ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಅನುಷ್ಠಾನಗೊಳಿಸಲು ಶ್ರಮಿಸಬೇಕು. ಇದರಿಂದ ಪಕ್ಷ ಇನ್ನಷ್ಟು ಬಲಿಷ್ಠವಾಗಲು ಸಾಧ್ಯವಾಗುತ್ತದೆ ಎಂದರು.

ಉಡುಪಿ ಶಾಸಕ ಕೆ. ರಘುಪತಿ ಭಟ್, ಕಾರ್ಕಳ ಶಾಸಕ ಸುನೀಲ್ ಕುಮಾರ್, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಬಿಜೆಪಿ ಮುಖಂಡರಾದ ಉದಯ ಕುಮಾರ್ ಶೆಟ್ಟಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಮುಖಂಡರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಸಂಧ್ಯಾ ರಮೇಶ್, ನೀತಾ ಗುರುರಾಜ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಕುತ್ಯಾರ್ ನವೀನ್ ಶೆಟ್ಟಿ ಸ್ವಾಗತಿಸಿದರು. ಕುಯಿಲಾಡಿ ಸುರೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

ಇದಕ್ಕೂ ಮುನ್ನ ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ನಗರದ ಜೋಡುಕಟ್ಟೆಯಿಂದ ತೆರೆದ ಜೀಪಿನಲ್ಲಿ ಮೆರವಣಿಗೆಯ ಮೂಲಕ ಸಭಾಂಗಣದವರೆಗೆ ಕರೆತರಲಾಯಿತು.

ಶಾಸಕರಾದ ಹಾಲಾಡಿ, ಸುಕುಮಾರ್ ಶೆಟ್ಟಿ ಗೈರು!

ಬಿಜೆಪಿ ರಾಜ್ಯಾಧ್ಯಕ್ಷರ ಅಭಿನಂದನೆ ಸಮಾರಂಭದಲ್ಲಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಅವರ ಗೈರು ಹಾಜರು ಎದ್ದು ಕಾಣುತ್ತಿತ್ತು.

ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಮಂತ್ರಿ ಸ್ಥಾನ ಕೈ ತಪ್ಪಿರುವುದಕ್ಕೆ ತೀವ್ರ ಅಸಮಾಧಾನಗಳು ವ್ಯಕ್ತವಾಗಿದ್ದವು. ಹಾಲಾಡಿಗೆ ವೇದಿಕೆಯಲ್ಲಿ ಅವರ ಹೆಸರನ್ನು ಅಂಟಿಸಿ ಖಾಲಿ ಕುರ್ಚಿಯನ್ನು ಇಟ್ಟು ಕಾಯ ಲಾಗಿತ್ತು. ಕೊನೆಗೂ ಅವರು ಬಾರದ ಕಾರಣ ಆ ಕುರ್ಚಿಯ್ನು ಬೇರೆಯವರು ಬಳಸಿಕೊಂಡರು.

ಆದರೆ ಬಳಿಕ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಹಾಲಾಡಿ ಹಾಜರಿದ್ದರೆನ್ನಲಾಗಿದೆ. ಅದೇ ರೀತಿ ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಅವರ ಗೈರು ಹಾಜರಿ ಕೂಡ ತೀವ್ರ ಚರ್ಚೆಗೆ ಕಾರಣವಾಗಿದೆ. ವೇದಿಕೆಯಲ್ಲಿ ಸುಕುಮಾರ ಶೆಟ್ಟಿಗೆ ಕುರ್ಚಿ ವ್ಯವಸ್ಥೆ ಮಾಡದಿರುವುದು ಕಂಡುಬಂತು.

ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ‘ಹಾಲಾಡಿ ಹಾಗೂ ಸುಕುಮಾರ್ ಶೆಟ್ಟಿ ಬೇರೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಮಾವೇಶಕ್ಕೆ ಬರಲು ಆಗಲ್ಲ ಎಂದು ಹೇಳಿದ್ದರು. ಅದಕ್ಕೆ ರಾಜ್ಯಾಧ್ಯಕ್ಷರು ಅನುಮತಿ ನೀಡಿದ್ದರು. ಸಾಮಾನ್ಯವಾಗಿ ಅವರವರ ಹೆಸರಿಗೆ ಕುರ್ಚಿಗಳನ್ನು ಹಾಕಿದ್ದೇವೆ. ಆದರೆ ಅವರು ಬಂದಿಲ್ಲ. ಈ ಬಗ್ಗೆ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ನಾವೆಲ್ಲ ಒಟ್ಟಾಗಿದ್ದೇವೆ’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News