ಬ್ರೆಕ್ಸಿಟ್ ಗಡು ವಿಸ್ತರಣೆಗೆ ಮನವಿ ಮಾಡುವುದಿಲ್ಲ: ಬೊರಿಸ್ ಜಾನ್ಸನ್

Update: 2019-09-10 14:52 GMT

ಲಂಡನ್, ಸೆ. 10: ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವ (ಬ್ರೆಕ್ಸಿಟ್) ಗಡುವನ್ನು ವಿಸ್ತರಿಸಲು ನಾನು ಒಕ್ಕೂಟಕ್ಕೆ ಮನವಿ ಮಾಡುವುದಿಲ್ಲ ಎಂದು ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಮಂಗಳವಾರ ಹೇಳಿದ್ದಾರೆ.

ಐರೋಪ್ಯ ಒಕ್ಕೂಟದಿಂದ ಬೇರ್ಪಡುವುದಕ್ಕೆ ಸಂಬಂಧಿಸಿದ ಒಪ್ಪಂದವೊಂದನ್ನು ಏರ್ಪಡಿಸಲು ಸಾಧ್ಯವಾಗದಿದ್ದರೆ, ಬ್ರೆಕ್ಸಿಟನ್ನು 2020ರವರೆಗೆ ಮುಂದೂಡಬೇಕು ಎಂದು ಪ್ರಧಾನಿಯನ್ನು ಒತ್ತಾಯಿಸುವ ಕಾನೂನೊಂದು ಜಾರಿಗೆ ಬಂದ ಗಂಟೆಗಳ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

ಅದೇ ವೇಳೆ, ಈಗಿನ ಬಿಕ್ಕಟ್ಟನ್ನು ಹೊಸ ಸಂಸದೀಯ ಚುನಾವಣೆ ಮೂಲಕ ಬಗೆಹರಿಸಲು ಯತ್ನಿಸುವ ಜಾನ್ಸನ್‌ರ ಪ್ರಯತ್ನವನ್ನು ಸಂಸದರು ಒಂದು ವಾರದ ಅವಧಿಯಲ್ಲಿ ಎರಡನೇ ಬಾರಿಗೆ ತಿರಸ್ಕರಿಸಿದ್ದಾರೆ.

ಬ್ರೆಕ್ಸಿಟ್‌ನ ಭವಿಷ್ಯ ಅನಿಶ್ಚಿತವಾಗಿರುವಂತೆಯೇ, ಅಕ್ಟೋಬರ್ 14ರವರೆಗೆ ಬ್ರಿಟನ್ ಸಂಸತ್ತನ್ನು ಅಮಾನತಿನಲ್ಲಿಡಲಾಗಿದೆ. ಇದಕ್ಕೆ ಸಂಬಂಧಿಸಿ ಹೌಸ್ ಆಫ್ ಕಾಮನ್ಸ್‌ನಲ್ಲಿ ಪ್ರತಿಪಕ್ಷ ಸಂಸದರು ಪ್ರತಿಭಟನೆಗಳನ್ನು ನಡೆಸಿದರು. ‘ಬಾಯಿಮುಚ್ಚಿಸಲಾಗಿದೆ’ ಎಂಬ ಫಲಕಗಳನ್ನು ಅವರು ಸದನದಲ್ಲಿ ಪ್ರದರ್ಶಿಸಿದರು ಹಾಗೂ ‘ನಿಮಗೆ ನಾಚಿಕೆಯಾಗಬೇಕು’ ಎಂಬುದಾಗಿ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಸಂಸದರತ್ತ ತಿರುಗಿ ಕೂಗಿದರು.

ಹೌಸ್ ಆಪ್ ಕಾಮನ್ಸ್‌ನಲ್ಲಿ ಮತದಾನ ನಡೆದಾಗ ಬ್ರೆಕ್ಸಿಟ್ ಪರ ಮತ್ತು ವಿರೋಧಿಗಳು ಸಂಸತ್ತಿನ ಹೊರಗೆ ಜಮಾಯಿಸಿದರು.

‘‘ಬ್ರೆಕ್ಸಿಟ್ ಒಪ್ಪಂದಕ್ಕಾಗಿ ಈ ಸರಕಾರ ಪ್ರಯತ್ನಿಸಲಿದೆ. ಅದೇ ವೇಳೆ, ಒಪ್ಪಂದ ಇಲ್ಲದೆಯೂ ಐರೋಪ್ಯ ಒಕ್ಕೂಟದಿಂದ ಹೊರಬರಲು ಅದು ಸಿದ್ಧವಾಗಿದೆ’’ ಎಂದು ಅವಧಿಪೂರ್ವ ಚುನಾವಣೆಗೆ ಸಂಬಂಧಿಸಿದ ಮತದಾನ ಫಲಿತಾಂಶದ ಬಳಿಕ ಜಾನ್ಸನ್ ಸಂಸತ್ತಿನಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News