×
Ad

150ನೇ ಗಾಂಧಿಜಯಂತಿಗೆ ಜಿಲ್ಲಾ ಕಾಂಗ್ರೆಸ್ ಸಿದ್ಧತೆ: ಹರೀಶ್ ಕುಮಾರ್

Update: 2019-09-10 20:35 IST

ಮಂಗಳೂರು, ಸೆ.10: ಮುಂದಿನ ಅಕ್ಟೋಬರ್ 2ರಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜಯಂತಿಯನ್ನು ಅದ್ದೂರಿಯಾಗಿ ನಡೆಸಲು ಭರದ ಸಿದ್ಧತೆ ನಡೆಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್‌ ಕುಮಾರ್ ತಿಳಿಸಿದ್ದಾರೆ.

ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆದ ಮಾಸಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶಕ್ಕಾಗಿ ಗಾಂಧೀಜಿಯವರು ಮಾಡಿದ ತ್ಯಾಗ ಬಲಿದಾನದ ಸಂದೇಶವನ್ನು ಪಸರಿಸುವ ನಿಟ್ಟಿನಲ್ಲಿ ಐದು ಕಿ.ಮೀ ದೂರ ಪಾದಯಾತ್ರೆ ನಡೆಸಲಾಗುವುದು. ಸಹಸ್ರಾರು ಕಾರ್ಯಕರ್ತರು ಭಾಗವಹಿಸಲಿದ್ದು ಬೃಹತ್ ಸಾರ್ವಜನಿಕ ಸಭೆಯನ್ನು ಏರ್ಪಡಿಸಲಾಗುವುದು ಎಂದರು.

ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್ ಮಾತನಾಡಿ, ಎಐಸಿಸಿ ನಿರ್ದೇಶನದಂತೆ ಕಾರ್ಯತಂತ್ರ ರೂಪಿಸಿ ಗಾಂಧೀಜಿಯ ಅಹಿಂಸಾ ತತ್ವಗಳನ್ನು ಜಾತ್ಯತೀತ ಸಿದ್ಧಾಂತಗಳನ್ನು ದೇಶದೆಲ್ಲೆಡೆ ಪ್ರಚುರಪಡಿಸುವಂತೆ ತೀರ್ಮಾನಿಸಲಾಗಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವಲ್ಲಿ ಕಾರ್ಯಕರ್ತರು ಸಕ್ರಿಯವಾಗಬೇಕು. ಮಹಾನೆರೆಗೆ ಪರಿಹಾರ ಒದಗಿಸದ ರಾಜ್ಯ ಸರಕಾರದ ವಿಳಂಬ ನೀತಿಯನ್ನು ಬಲವಾಗಿ ಖಂಡಿಸಬೇಕು ಎಂದು ಹೇಳಿದರು.

ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಗಾಂಧೀಜಿಯವರ ಬಗ್ಗೆ ಸೆಮಿನಾರ್, ಬುದ್ಧಿ ಜೀವಿಗಳ ಜೊತೆ ಸಂವಾದ ಗೋಷ್ಠಿಗಳನ್ನು ನಡೆಸಬೇಕೆಂದು ಸಲಹೆ ನೀಡಿದರು. ಬೆಂಗಳೂರಿಗೆ ಬಂದು ನೆರೆ ಪರಿಹಾರಕ್ಕೆ ಏನೂ ಪ್ರತಿಕ್ರಿಯಿಸದೇ ಹರ್ಯಾಣದ ಚುನಾವಣಾ ಪ್ರಚಾರಕ್ಕೆ ತೆರಳುವ ಮೂಲಕ ಮೋದಿಯವರು ಕರ್ನಾಟಕದಲ್ಲಿ ನೆರೆ ಸಂತ್ರಸ್ತರನ್ನು ನಿರ್ಲಕ್ಷಿಸಿದ್ದಾರೆ ಎಂದರು.

ಮಾಜಿ ಸಚಿವ ಯು.ಟಿ ಖಾದರ್ ಮಾತನಾಡಿ, ಗಾಂಧಿ ಜಯಂತಿಯನ್ನು ಶಿಸ್ತುಬದ್ಧವಾಗಿ ನಡೆಸುವಲ್ಲಿ ಎಲ್ಲ ಬ್ಲಾಕ್, ಅಧ್ಯಕ್ಷರು, ವಾರ್ಡ್ ಹಾಗೂ ಬೂತ್‌ಮಟ್ಟದ ಕಾರ್ಯಕರ್ತರು ಸಂಪೂರ್ಣ ಸಹಕಾರ ನೀಡುವುದರ ಜೊತೆಗೆ ಕಾರ್ಯಕ್ರಮವು ಮಾದರಿಯಾಗಬೇಕು ಎಂದರು.

ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಮೊಯ್ದಿನ್ ಬಾವ, ಶಕುಂತಲಾ ಶೆಟ್ಟಿ, ಜೆ.ಆರ್. ಲೋಬೊ, ಕಾಂಗ್ರೆಸ್ ಮುಖಂಡರಾದ ಪಿ.ವಿ. ಮೋಹನ್, ಕವಿತಾ ಸನಿಲ್, ಶಶಿಧರ್ ಹೆಗ್ಡೆ, ಧನಂಜಯ ಅಡ್ಪಂಗಾಯ, ಸುರೇಶ್ ಬಳ್ಳಾಲ್, ಸಂತೋಷ್‌ಕುಮಾರ್ ಶೆಟ್ಟಿ, ಲೋಕೇಶ್ ಹೆಗ್ಡೆ, ಶಾಲೆಟ್ ಪಿಂಟೊ, ಸೇವಾದಳ ಅಶ್ರಫ್, ಎನ್.ಎಸ್. ಕರೀಂ, ಎ.ಸಿ. ವಿನಯರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬ್ಲಾಕ್ ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಜಿಪಂ ಮತ್ತು ಮನಪಾ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ ಉಳ್ಳಾಲ್ ಕಾರ್ಯಕ್ರಮ ನಿರ್ವಹಿಸಿದರು. ಜಿಲ್ಲಾ ವಕ್ತಾರ ಖಾಲಿದ್ ಉಜಿರೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News