×
Ad

ಕೋಟೇಶ್ವರದಲ್ಲಿ ಮುಕ್ತ ಫಿಡೆ ರೇಟಿಂಗ್ ಚೆಸ್ ಪಂದ್ಯಾವಳಿ

Update: 2019-09-10 21:30 IST

ಕುಂದಾಪುರ, ಸೆ.10:ಕಶ್ವಿ ಚೆಸ್ ಸ್ಕೂಲ್ ಕುಂದಾಪುರ ಹಾಗೂ ಹಳೆ ವಿದ್ಯಾರ್ಥಿಗಳ ಸಂಘ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ ಇವರ ಜಂಟಿ ಆಶ್ರಯದಲ್ಲಿ ಮುಂದಿನ ಅ.10ರಿಂದ 17ರವರೆಗೆ ದಕ್ಷಿಣ ಭಾರತದಲ್ಲಿಯೇ ಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದ ಮುಕ್ತ ಫಿಡೆ ರೇಟಿಂಗ್ ಚೆಸ್ ಪಂದ್ಯಾವಳಿಯೊಂದು ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆಯಲಿದೆ.

ಮಕ್ಕಳ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಪೂರಕವಾದ ಚೆಸ್ ಆಟದ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಕಶ್ವಿ ಚೆಸ್ ಸ್ಕೂಲ್ ಮಕ್ಕಳಿಗೆ ಚೆಸ್ ತರಬೇತಿ ನೀಡುವುದಲ್ಲದೇ ಕುಂದಾಪುರದಲ್ಲಿ ಜಿಲ್ಲಾ, ಅಂತರ ಜಿಲ್ಲಾ, ರಾಜ್ಯಮಟ್ಟದ ವಿವಿಧ ಚೆಸ್ ಪಂದ್ಯಾವಳಿಗಳನ್ನು ಆಯೋಜಿಸುತ್ತಾ ಬಂದಿದೆ.

ಇದೀಗ ಕಶ್ವಿ ಚೆಸ್ ಸ್ಕೂಲ್, ಕೋಟೇಶ್ವರ ಪಬ್ಲಿಕ್ ಸ್ಕೂಲ್‌ನ ಹಳೆವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ ಒಂದುವಾರದ ಫಿಡೆ ರೇಟಿಂಗ್ ಮುಕ್ತ ಚೆಸ್ ಟೂರ್ನಿಯನ್ನು ಆಯೋಜಿಸುತ್ತಿದೆ. ಒಟ್ಟು 20 ಲಕ್ಷ ರೂ.ಬಹುಮಾನ ಮೊತ್ತವನ್ನು ಹೊಂದಿರುವ, ಪ್ರತಿ ವಿಭಾಗ, ವಿವಿಧ ವಯೋಮಿತಿಯ ವಿಜೇತರಿಗೆ ಪ್ರತ್ಯೇಕ ಬಹುಮಾನ ನೀಡುವ ಈ ಪಂದ್ಯಾವಳಿಯಲ್ಲಿ ಹಲವು ರಾಜ್ಯ ಹಾಗೂ ವಿದೇಶಗಳಿಂದ ಚೆಸ್ ಗ್ರಾಂಡ್ ಮಾಸ್ಟರ್ಸ್‌, ಅಂತಾರಾಷ್ಟ್ರೀಯ ಮಾಸ್ಟರ್ಸ್‌ ಸೇರಿದಂತೆ ಸುಮಾರು ಒಂದು ಸಾವಿರಕ್ಕೂ ಅಧಿಕ ಚೆಸ್ ಆಟಗಾರರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಕಶ್ವಿ ಚೆಸ್ ಸ್ಕೂಲ್‌ನ ನರೇಶ್ ಬಿ. ಹಾಗೂ ಹಳೆ ವಿದ್ಯಾರ್ಥಿ ಸಂಘದ ಸುಬ್ರಹ್ಮಣ್ಯ ಶೆಟ್ಟಿಗಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News