ಉಡುಪಿ: ಕೇಂದ್ರ ಸರಕಾರದ ಜನವಿರೋಧಿ ಸಾರಿಗೆ ನೀತಿಗೆ ಸಭಾಪತಿ ಖಂಡನೆ

Update: 2019-09-10 16:01 GMT

ಉಡುಪಿ, ಸೆ.10: ಕೇಂದ್ರ ಸರಕಾರವು ಜಾರಿಗೆ ತಂದಿರುವ ಜನವಿರೋಧಿ ಸಾರಿಗೆ ನೀತಿಯು ಸುರಕ್ಷತೆಯ ಹೆಸರಿನಲ್ಲಿ ಜನರ ಮೇಲೆ ಮಾಡಿರುವ ದಬ್ಬಾಳಿಕೆಯಾಗಿದೆ. ಬಹುಮತ ಇದೆಯೆಂದು ತಾವೇನು ಮಾಡಿದರೂ ಜನ ಒಪ್ಪುತ್ತಾರೆ ಎಂದು ಸಾರಿಗೆ ನೀತಿಗೆ ತಿದ್ದುಪಡಿ ತಂದು ಬೇಕಾಬಿಟ್ಟಿ ದಂಡ ವಿಧಿಸುವ ಕೇಂದ್ರ ಸರಕಾರದ ದುರಾಡಳಿತವನ್ನು ಮಾಜಿ ಶಾಸಕ ಹಾಗೂ ಅಖಿಲ ಭಾರತ ಮೀನುಗಾರ ಕಾಂಗ್ರೆಸ್ ಸಮಿತಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಯು. ಆರ್.ಸಭಾಪತಿ ತೀವ್ರವಾಗಿ ಖಂಡಿಸಿದ್ದಾರೆ.

ಕೇಂದ್ರದ ಹೊಸ ಸಾರಿಗೆ ನೀತಿಯಲ್ಲಿ ಸಾಮಾನ್ಯ ನಿಯಮ ಉಲ್ಲಂಘನೆಗೆ ಈ ಹಿಂದೆ ಇದ್ದ 100 ರೂಪಾಯಿ ದಂಡ ಈಗ 500; ರಸ್ತೆ ನಿಯಮ ಉಲ್ಲಂಘನೆಗೆ 100ರೂ.ನಿಂದ 1000ರೂ. ಸೀಟ್ ಬೆಲ್ಟ್ ಧರಿಸದಿದ್ದರೆ ಈ ಮೊದಲಿದ್ದ 100ರೂ.ಗೆ 1000ರೂ. ಹೆಲ್ಮೆಟ್ ಧರಿಸದೆ ಇದ್ದರೆ 100 ರೂ.ನಿಂದ 1000ರೂ.ಅಪ್ರಾಪ್ತರು ವಾಹನ ಚಾಲನೆಗೈದರೆ 25,000ರೂ. ದಂಡ ಮತ್ತು 3 ವರ್ಷ ಜೈಲುವಾಸ, 12 ತಿಂಗಳು ಲೈಸನ್ಸ್ ರದ್ದು ಸೇರಿದಂತೆ ಹಲವಾರು ಹೊಸ ಜನಪೀಡನಾ ನಿಯಮಗಳನ್ನು ತಂದು ಜನರನ್ನು ಸಂಕಷ್ಟಕ್ಕೆ ಈಡು ಮಾಡಿರುವುದು ತೀರ ಶೋಚನೀಯ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರಕಾರ ಈ ತಿದ್ದುಪಡಿಗಳನ್ನು ಕೂಡಲೇ ಹಿಂದಕ್ಕೆ ಪಡೆದು ವೈಜ್ಞಾನಿಕ ವಾಗಿ ದಂಡನಿಯಮಗಳ ಪರಿಷ್ಕರಿತ ನಿಯಮ ಜಾರಿಗೊಳಿಸಬೇಕೆಂದು ಸಭಾಪತಿ ಅಗ್ರಹಿಸಿದ್ದಾರೆ.

ಆರ್ಥಿಕ ದಿವಾಳಿತನದ ಸಂಕೇತ: ಡಾಲರ್ ಎದುರು ರೂಪಾಯಿ ವೌಲ್ಯ ನಿರಂತರವಾಗಿ ಕುಸಿಯುತ್ತಾ ಮುಂದುವರಿದಿದ್ದು ಇದರಿಂದ ದೇಶದಲ್ಲಿ ಭೀಕರ ಆರ್ಥಿಕ ಹಿಂಜರಿತವುಂಟಾಗಿದೆ. ಅದರ ಪರಿಣಾಮ ಜಿಡಿಪಿ ಶೇ.5ಕ್ಕೆ ಇಳಿದ್ದಿದು ಐತಿಹಾಸಿಕ ಕುಸಿತ ಕಂಡಿದೆ. ಇದನ್ನು ನಿಯಂತ್ರಿಸಲಾ ಗದೆ ಕೇಂದ್ರ ಸರಕಾರ ಇದೀಗ ರಿಸರ್ವ್ ಬ್ಯಾಂಕ್‌ನಲ್ಲಿದ್ದ ಆಪತ್ಕಾಲ ನಿಧಿ ರೂಪಾಯಿ 1 ಕೋಟಿ 72 ಲಕ್ಷ ಕೋಟಿ ಹಣಕ್ಕೂ ಕನ್ನಹಾಕಿ ದೇಶದ ಅರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ ಎಂದೂ ಸಭಾಪತಿ ಟೀಕಿಸಿದ್ದಾರೆ.

ಇದಕ್ಕಾಗಿಯೇ ದೇಶದ ಪ್ರಮುಖ ರಾಷ್ಟ್ರೀಕತ ಬ್ಯಾಂಕುಗಳನ್ನು ವಿಲಯನ ಮಾಡಿರುವುದೂ ಅಕ್ಷೇಪಾರ್ಹವಾಗಿದೆ. ಈ ಬಗ್ಗೆ ಕಾಂಗ್ರೆಸ್ ಪಕ್ಷ ಕೇಂದ್ರದ ದುರಾಡಳಿತ ವಿರುಧ್ಧ ಪ್ರತಿಭಟನೆ ಮಾಡುವುದರ ಮೂಲಕ ಜನಾಂದೋಲನಕ್ಕೆ ಚಾಲನೆ ನೀಡಲಿದೆ ಎಂದು ಸಭಾಪತಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News