ಮಣಿಪಾಲ: ಆತ್ಮಹತ್ಯೆ ತಡೆಗೆ ನರ್ಸಿಂಗ್ ವಿದ್ಯಾರ್ಥಿಗಳಿಂದ ಜಾಗೃತಿ ಕಾರ್ಯಕ್ರಮ

Update: 2019-09-10 16:11 GMT

ಮಣಿಪಾಲ, ಸೆ.10: ವಿಶ್ವ ಆತ್ಮಹತ್ಯಾ ತಡೆ ದಿನಾಚರಣೆಯ ಅಂಗವಾಗಿ ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್‌ನ ಸೈಕ್ಯಾಟ್ರಿಕ್ಸ್ ಮತ್ತು ಮಾನಸಿಕ ಆರೋಗ್ಯ ನರ್ಸಿಂಗ್ ವಿಭಾಗದ ವಿದ್ಯಾರ್ಥಿಗಳಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಹಲವು ಕಾರ್ಯಕ್ರಮಗಳು ಇಂದು ನಡೆದವು.

ಆತ್ಮಹತ್ಯೆಗೆ ಕಾರಣ, ಅವುಗಳ ಕುರಿತು ಇರುವ ತಪ್ಪು ಅಭಿಪ್ರಾಯಗಳು ಹಾಗೂ ಆತ್ಮಹತ್ಯೆ ತಡೆಗೆ ಕೈಗೊಳ್ಳಬೇಕಾದ ಕ್ರಮಗಳು ಕುರಿತು ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ಯುವಜನತೆಯಲ್ಲಿ ಅರಿವು ಮೂಡಿಸಲು ಬೀದಿ ನಾಟಕ ಸೇರಿದಂತೆ ವಿವಿಧ ಮಾಧ್ಯಮಗಳನ್ನು ಇವರು ಬಳಸಿಕೊಂಡರು.

ಎರಡನೇ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳು ಮಣಿಪಾಲದ ಟೈಗರ್ ಸರ್ಕಲ್‌ನಲ್ಲಿ ಬೀದಿ ನಾಟಕಗಳನ್ನು ಪ್ರದರ್ಶಿಸುವ ಮೂಲಕ ಜನರಲ್ಲಿ ಆತ್ಮಹತ್ಯೆ ಕುರಿತಂತೆ ಅರಿವು ಮೂಡಿಸುವ ಪ್ರಯತ್ನ ನಡೆಸಿದರು. ನಾವೆಲ್ಲರೂ ಸೇರಿ ಆತ್ಮಹತ್ಯೆ ತಡೆಗಟ್ಟಲು ಶ್ರಮಿಸೋಣ ಎಂದು ಎಂಕಾನ್‌ನ ಸಹಾಯಕ ಪ್ರಾಧ್ಯಾಪಕಿ ಆಶಾ ನಾಯಕ್ ಜನರಲ್ಲಿ ಮನವಿ ಮಾಡಿದರು.

ಆತ್ಮಹತ್ಯೆಗೆ ಸುಲಭದಲ್ಲಿ ಬಲಿಯಾಗುವ ಯುವ ವರ್ಗಕ್ಕೆ ಈ ಕುರಿತು ಜಾಗೃತಿ ಮೂಡಿಸಲು ನರ್ಸಿಂಗ್ ಕಾಲೇಜಿನ ಎರಡನೇ ವರ್ಷದ ಪಿಬಿಬಿ ವಿಭಾಗದ ವಿದ್ಯಾರ್ಥಿಗಳು ಮಣಿಪಾಲ ಜೂನಿಯರ್ ಕಾಲೇಜಿನಲ್ಲಿ ಆರೋಗ್ಯ ಅರಿವು ಕಾರ್ಯಕ್ರಮವನ್ನು ಆಯೋಜಿಸಿದರು. ಇದರಲ್ಲಿ ಪಿಯುಸಿಯಲ್ಲಿ ಕಲಿಯುತ್ತಿರುವ 165ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಭಾಗವಹಿಸಿದ್ದರು.

'ಸ್ವಯಂ ಹಾನಿಯ ತಡೆ' ಕುರಿತ ಕಾರ್ಯಾಗಾರವೊಂದನ್ನು ಮಾಹೆಯ ಡಿಎಸ್‌ಎ ವಿಭಾಗ, ನರ್ಸಿಂಗ್ ಕಾಲೇಜಿನ ಸಹಯೋಗದೊಂದಿಗೆ ಆಯೋಜಿ ಸಿತ್ತು. ಮಾಹೆಯ ಪ್ರೊ ವೈಸ್ ಚಾನ್ಸಲರ್ ಡಾ.ಪೂರ್ಣಿಮಾ ಬಾಳಿಗಾ ಹಾಗೂ ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಪೂರ್ಣಿಮಾ ಬಾಳಿಗಾ, ವಿಶ್ವದಲ್ಲಿಂದು ಆತ್ಮಹತ್ಯೆಯ ಪ್ರಮಾಣ ಶೇ.11.4ಆಗಿದೆ. ಆದರೆ ಸಿಕ್ಕಿಂನಲ್ಲಿ ಜಾಗತಿಕ ಪ್ರಮಾಣದ ಮೂರು ಪಟ್ಟು (ಶೇ.37) ಆತ್ಮಹತ್ಯೆಗಳು ವರದಿಯಾಗುತ್ತಿವೆ ಎಂದರು. ಆತ್ಮಹತ್ಯೆಯ ಪೂರ್ವಸೂಚನೆಗಳು ಕೆಲವರಲ್ಲಿ ಕಂಡುಬರುತ್ತದೆ. ಇವುಗಳನ್ನು ನಿಕಟವಾಗಿ ಗಮನಿಸಿ ಅವುಗಳ ತಡೆಗೆ ಕ್ರಮ ಕೈಗೊಳ್ಳಬೇಕು ಎಂದರು.

ಕೆಎಂಸಿಯ ವೈದ್ಯರಾದ ಡಾ.ಸಮೀರ್ ಪ್ರಹರಾಜ್, ಸೈಕಾಟ್ರಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರವೀಣ್ ಜೈನ್, ಎಂಕಾನ್‌ನ ರೆಂಜುಲಾಲ್ ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News