ಕಾರ್ಕಳ: ಎಂಸಿಸಿ ಬ್ಯಾಂಕ್‌ನಲ್ಲಿ ಎಟಿಎಂ, ಇ-ಸ್ಟಾಂಪಿಂಗ್‌ಗೆ ಚಾಲನೆ

Update: 2019-09-10 17:32 GMT

ಕಾರ್ಕಳ, ಸೆ.10: ಎಂಸಿಸಿ ಬ್ಯಾಂಕ್‌ನ ಕಾರ್ಕಳ ಶಾಖೆಯಲ್ಲಿ ಎಟಿಎಂ ಮತ್ತು ಇ-ಸ್ಟಾಂಪಿಂಗ್ ವ್ಯವಸ್ಥೆಯನ್ನು ಮಂಗಳವಾರ ಉದ್ಘಾಟಿಸಲಾಯಿತು.

ಸಮಾರಂಭದಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ್ ಕುಮಾರ್ ಎಟಿಎಂ ಯಂತ್ರವನ್ನು ಉದ್ಘಾಟಿಸಿದರು. ಉಡುಪಿ ಸಹಕಾರಿ ಸಂಘಗಳ ಉಪ ರಿಜಿಸ್ಟ್ರಾರ್ ಪ್ರವೀಣ್ ಬಿ. ನಾಯಕ್ ಅವರು ಇ-ಸ್ಟಾಂಪಿಂಗ್ ವ್ಯವಸ್ಥೆಗೆ ಚಾಲನೆ ನೀಡಿದರು.

ಸಂತ ಲಾರೆನ್ಸ್ ಮೈನರ್ ಬೆಸಿಲಿಕ, ಅತ್ತೂರು ಚರ್ಚ, ಕಾರ್ಕಳ ಇದರ ರೆಕ್ಟರ್ ಮತ್ತು ಪಾದ್ರಿ ಫಾ. ಜಾರ್ಜ್ ಡಿಸೋಜ ಅವರು ಆಶೀರ್ವಚನ ನೀಡಿದರು. ಬ್ಯಾಂಕ್‌ನ ಉಪಾಧ್ಯಕ್ಷ ಮತ್ತು ಶಾಖೆಯ ಉಸ್ತುವಾರಿ ನಿರ್ದೇಶಕ ಜೆರಾಲ್ಡ್ ಜೂಡ್ ಡಿಸಿಲ್ವ ಅವರು ಗಣ್ಯರನ್ನು ಮತ್ತು ಬ್ಯಾಂಕ್‌ನ ಗ್ರಾಹಕರನ್ನು ಸ್ವಾಗತಿಸಿದರು.

ಶಾಸಕ ಸುನೀಲ್ ಕುಮಾರ್ ಮಾತನಾಡಿ, ಕಾರ್ಕಳದಲ್ಲಿ ಎಟಿಎಂ ಮತ್ತು ಇ-ಸ್ಟಾಂಪಿಂಗ್ ವ್ಯವಸ್ಥೆ ಪರಿಚಯಿಸಿರುವುದಕ್ಕೆ ಬ್ಯಾಂಕನ್ನು ಶ್ಲಾಘಿಸಿದರು. ಬ್ಯಾಂಕ್ ಸಿಬ್ಬಂದಿ ಮತ್ತು ಗ್ರಾಹಕರು ಉದ್ಯಮ ಕೇಂದ್ರಿತರಾಗುವ ಮೂಲಕ ಎಂಸಿಸಿ ಬ್ಯಾಂಕ್ ಇನ್ನಷ್ಟು ಅಭಿವೃದ್ಧಿ ಸಾಧಿಸಲು ನೆರವಾಗುವಂತೆ ಅವರು ಮನವಿ ಮಾಡಿದರು.

ನಂತರ ಮಾತನಾಡಿದ ಪ್ರವೀಣ್ ಬಿ.ನಾಯಕ್, ಶತಮಾನದಷ್ಟು ಹಳೆಯ ಬ್ಯಾಂಕ್ ಈಗಾಗಲೇ ಹೆಚ್ಚಿನ ಸಾಧನೆಯನ್ನು ಮಾಡಬೇಕಿತ್ತು ಎಂದು ಹೇಳಿದರು ಮತ್ತು ಅದಕ್ಕಾಗಿ ಬಧ್ದತೆಯುಳ್ಳ ಗ್ರಾಹಕರ ಅಗತ್ಯವಿದೆ ಎಂದು ಅಭಿಪ್ರಾಯಿಸಿದರು.

ಎಂಸಿಸಿ ಬ್ಯಾಂಕ್ ಕಳೆದ ಹತ್ತು ವರ್ಷಗಳಲ್ಲಿ ಮಾಡಿರುವ ಪ್ರಗತಿಯ ಬಗ್ಗೆ ಫಾ. ಜಾರ್ಜ್ ಡಿಸೋಜ ಸಂತಸ ವ್ಯಕ್ತಪಡಿಸಿದರು. ಗ್ರಾಹಕರಿಗೆ ನಗುಮೊಗದ ಸೇವೆ ಮತ್ತು ಸಹಾಯಗುಣ ಬ್ಯಾಂಕ್‌ಗೆ ಹೆಚ್ಚಿನ ಲಾಭವನ್ನು ತರಲಿದೆ ಎಂದು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News