ಈ ವ್ಯವಹಾರಗಳಿಗೆ ಟಿಡಿಎಸ್‌ನಿಂದ ವಿನಾಯಿತಿ

Update: 2019-09-11 04:17 GMT

ಹೊಸದಿಲ್ಲಿ: ವಾರ್ಷಿಕವಾಗಿ ಖಾತೆಯಿಂದ ಒಂದು ಕೋಟಿ ರೂ. ಅಥವಾ ಅಧಿಕ ಮೊತ್ತವನ್ನು ಹಿಂಪಡೆದಲ್ಲಿ ಶೇಕಡ 2ರಷ್ಟು ತೆರಿಗೆಯನ್ನು ಮೂಲದಲ್ಲೇ ಕಡಿತಗೊಳಿಸುವ ಪ್ರಸ್ತಾವದಿಂದ ಕೆಲ ಕ್ಷೇತ್ರಗಳಿಗೆ ವಿನಾಯಿತಿ ನೀಡುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ಹೇಳಿವೆ. 

ಮುಖ್ಯವಾಗಿ ಕೃಷಿಕರ ಜತೆ ನಡೆಸುವ ವ್ಯವಹಾರಗಳಿಗೆ ಇದು ಅನ್ವಯಿಸಲಿದೆ.

ನಗದು ವಹಿವಾಟನ್ನು ನಿರುತ್ತೇಜಿಸುವ ದೃಷ್ಟಿಯಿಂದ ಈ ಬಾರಿಯ ಬಜೆಟ್‌ನಲ್ಲಿ ಈ ವಿಶೇಷ ತೆರಿಗೆಯನ್ನು ಅರಂಭಿಸಲಾಗಿದ್ದು, ಸೆ. 1ರಿಂದ ಜಾರಿಯಾಗಿದೆ. 2019-20ನೇ ಹಣಕಾಸು ವರ್ಷದಲ್ಲಿ ಈಗಾಗಲೇ ಒಂದು ಕೋಟಿ ರೂಪಾಯಿಗಿಂತ ಹೆಚ್ಚಿನ ಮೊತ್ತ ಪಡೆದಿದ್ದಲ್ಲಿ, ತಕ್ಷಣದಿಂದಲೇ ಟಿಡಿಎಸ್ ಕಡಿತ ಆರಂಭವಾಗುತ್ತದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆದರೆ ನಗದು ವಹಿವಾಟನ್ನೇ ಅಧಿಕವಾಗಿ ನಡೆಸುವ ಕೆಲ ವಲಯಗಳಿಗೆ ಇದರಿಂದ ವಿನಾಯಿತಿ ನೀಡಲು ಸರ್ಕಾರ ಮುಂದಾಗಿದೆ. "ವಲಯವಾರು ಮನವಿಗಳ ಹಿನ್ನೆಲೆಯಲ್ಲಿ ಇದನ್ನು ಪರಾಮರ್ಶಿಸಲಾಗುತ್ತಿದೆ. ನಗದು ವಹಿವಾಟು ಅನಿವಾರ್ಯ ಎನ್ನುವಂಥ ಕೆಲ ವಲಯಗಳಿಗೆ ಈ ತೆರಿಗೆಯಿಂದ ವಿನಾಯಿತಿ ನೀಡುವ ಸಾಧ್ಯತೆ ಪರಿಶೀಲಿಸಲಾಗುತ್ತಿದೆ" ಎಂದು ಅವರು ತಿಳಿಸಿದ್ದಾರೆ.

ಕಾನೂನಿನ ಅನ್ವಯ, ಆರ್‌ಬಿಐ ಸಲಹೆ ಪಡೆದು ಕೆಲ ನಿರ್ದಿಷ್ಟ ವಲಯಗಳಿಗೆ ಟಿಡಿಎಸ್‌ನಿಂದ ವಿನಾಯಿತಿ ನಿಡುವ ಅಧಿಕಾರ ಇದೆ ಎಂದು ಮತ್ತೊಬ್ಬ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಬಹುತೇಕ ರೈತರು ಚೆಕ್ ಮೂಲಕ ಹಣ ಪಡೆಯಲು ನಿರಾಕರಿಸುವುದರಿಂದ ನಗದು ಮೂಲಕ ಪಾವತಿಸುವುದು ಅನಿವಾರ್ಯವಾಗುತ್ತದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್‌ವಾಲ್ ಹೇಳಿದ್ದಾರೆ. ಈ ಬಗ್ಗೆ ಮನವರಿಕೆ ಮಾಡಲು ಕೇಂದ್ರ ಹಣಕಾಸು ಸಚಿವರನ್ನು ಸದ್ಯದಲ್ಲೇ ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News