ಪುತ್ತೂರು: ಅರಣ್ಯ ಇಲಾಖೆಯ ಸಿಬ್ಬಂದಿಗಳಿಂದ ರಕ್ತದಾನ ಶಿಬಿರ

Update: 2019-09-11 13:05 GMT

ಪುತ್ತೂರು: ದೇಶಕ್ಕಾಗಿ ಸೇವೆ ಮಾಡಿ ಹುತಾತ್ಮರಾದವರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಅರಣ್ಯ ಇಲಾಖೆಯ ಸೇವೆಯಲ್ಲಿ ಹುತಾತ್ಮರಾದವರ ಸ್ಮರಣೆಗಾಗಿ ಇಲಾಖೆಯ ಸಿಬ್ಬಂದಿಗಳು ರಕ್ತದಾನ ನಡೆಸುವ ಮೂಲಕ ಮಾದರಿ ಹಾಗೂ ಸ್ಮರಣೀಯ ಕಾರ್ಯ ನಡೆಸಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.

ಅವರು ಬುಧವಾರ ರೋಟರಿ ಬ್ಲಡ್ ಬ್ಯಾಂಕ್‍ನಲ್ಲಿ ಕರ್ನಾಟಕ ರಾಜ್ಯ ಉಪವಲಯ ಅರಣ್ಯಾಧಿಕಾರಿಗಳ ಸಂಘ ಮಂಗಳೂರು ವಿಭಾಗ ಹಾಗೂ ಕರ್ನಾಟಕ ರಾಜ್ಯ ಅರಣ್ಯ ರಕ್ಷಕರ ಮತ್ತು ವೀಕ್ಷಕರ ಸಂಘದ ವತಿಯಿಂದ ಸರಕಾರಿ ಸಾರ್ವಜನಿಕ ಆಸ್ಪತ್ರೆ, ರೋಟರಿ ಕ್ಯಾಂಪ್ಕೋ  ಬ್ಲಡ್ ಬ್ಯಾಂಕ್ ಪುತ್ತೂರು ಮತ್ತು ಮಂಗಳೂರು ವೆನ್ಲಾಕ್ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನದ ಅಂಗವಾಗಿ ಆಯೋಜಿಸಲಾದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಪರಿಸರ ರಕ್ಷಣೆ ಮಾತ್ರವಲ್ಲದೆ ಜನರ ಜೀವ ರಕ್ಷಣೆಯೂ ಮುಖ್ಯ ಎಂಬ ದೃಷ್ಟಿಕೋನದ ಅರಣ್ಯ ಇಲಾಖೆ ನಡೆಸುತ್ತಿರುವ ಕಾರ್ಯಕ್ರಮಗಳು ಶ್ಲಾಘನೀಯವಾಗಿದೆ. ಸಮಾಜದಲ್ಲಿ ಆರೋಗ್ಯಪೂರ್ಣ, ನೆಮ್ಮದಿಯ ಬದುಕಿಗಾಗಿ ಹಾಗೂ ದುರ್ಬಲರು, ಅಸಹಾಯಕರಿಗೆ ನೆರವಾಗುವ ದೃಷ್ಟಿಯಿಂದ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕಾದ ಅನಿವಾರ್ಯತೆ ಇದೆ. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬಂದಿ ಇದನ್ನು ಸಾಬೀತುಪಡಿಸಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಭಾಗ ಉಪ ವಲಯ ಅರಣ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಸಂಜೀವ ಕೆ. ಮಾತನಾಡಿ ಅರಣ್ಯ ಸಂಪತ್ತಿನ ರಕ್ಷಣೆ ಹಾಗೂ ಸಮಾಜಕ್ಕಾಗಿ ತ್ಯಾಗ ಮಾಡಿದ ಅರಣ್ಯ ಸಿಬಂದಿಯ ನೆನಪಿಗಾಗಿ ಈ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ. ಯಾವುದೇ ಭೇದ ಭಾವವಿಲ್ಲದೆ ಮಾಡುವ ಮಹತ್ವದ ದಾನ ರಕ್ತದಾನವಾಗಿದ್ದು,  ರಕ್ತದಾನ ಮಾಡುವಾತನ ಮನಸ್ಸಿನಲ್ಲಿ ಉತ್ತಮ ಭಾವನೆ ಇದ್ದರೆ ಅದೇ ಫಲಾನುಭವಿಗೆ ಶ್ರೀ ರಕ್ಷೆಯಾಗುತ್ತದೆ ಎಂದರು.

ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಮೆಡಿಕಲ್ ಆಫೀಸರ್ ಡಾ. ರಾಮಚಂದ್ರ ಕೆ. ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ರಕ್ತದಾನದ ಮಹತ್ವ, ರಕ್ತದಾನ ಮಾಡುವ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್. ಸುಬ್ರಹ್ಮಣ್ಯ ರಾವ್, ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಭುಜಂಗ ಆಚಾರ್ಯ, ತಾ.ಪಂ. ಸದಸ್ಯ ಹಾಗೂ ಬಲ್ನಾಡು ಅರಣ್ಯ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಸರಕಾರಿ ಆಸ್ಪತ್ರೆ ಸಹಾಯಕ ಆಡಳಿತಾಧಿಕಾರಿ ಯೋಗಾನಂದ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಮೌರಿಸ್ ಮಸ್ಕರೇನಸ್, ಅರಣ್ಯ ರಕ್ಷಕ ಮತ್ತು ವೀಕ್ಷಕರ ಸಂಘದ ಅಧ್ಯಕ್ಷ ಕೆ. ಎನ್. ಜಗದೀಶ್, ಪುತ್ತೂರು ವಲಯ ಅರಣ್ಯಾ„ಕಾರಿ ಮೋಹನ್ ಬಿ.ಜಿ., ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಮತ್ತಿತರರು ಉಪಸ್ಥಿತರಿದ್ದರು.

ಉಪವಲಯ ಅರಣ್ಯಾಧಿಕಾರಿ ಶಿವಾನಂದ ಆಚಾರ್ಯ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News