ಮಸಾಲ ಸುದ್ದಿಗೆ ವಿಚಲಿತರಾಗಬೇಡಿ: ನಳಿನ್ ಕುಮಾರ್ ಕಟೀಲ್

Update: 2019-09-11 15:14 GMT

ಮಂಗಳೂರು, ಸೆ.11: ಬಿಜೆಪಿಯಲ್ಲಿ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ರಾಜಕೀಯದಲ್ಲಿ ಮಸಾಲೆ ಸುದ್ದಿ ಮಾಡಲು ಬಿಜೆಪಿ ಬಗ್ಗೆ ಮಾಧ್ಯಮಗಳು ನಕಾರಾತ್ಮಕ ಸುದ್ದಿಗಳನ್ನು ಬಿತ್ತರಿಸುತ್ತಿವೆ. ಈ ಬಗ್ಗೆ ಕಾರ್ಯಕರ್ತರು ಚಿಂತೆ ಪಡಬೇಕಾಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ದ.ಕ. ಜಿಲ್ಲಾ ಬಿಜೆಪಿ ಕಾರ್ಯಕರ್ತರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಮುಖಂಡರಲ್ಲಿ ಯಾವುದೇ ವಿರೋಧಾಭಾಸ ಗಳಿಲ್ಲ. ಕೋರ್ ಕಮಿಟಿ ಸಭೆಯಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ ಎನ್ನುವುದು ಸಲ್ಲದು. ಯಡಿಯೂರಪ್ಪ ನೇತೃತ್ವದಲ್ಲಿ ಕೇಂದ್ರ ಸಮಿತಿ ಸಭೆ ನಡೆದಿದ್ದು, ಅಶೋಕ್ ಅವರು ಅನಾರೋಗ್ಯದ ಕಾರಣದಿಂದಾಗಿ ಸಭೆಗೆ ಹಾಜರಾಗಿರಲಿಲ್ಲ ಎಂದು ಸ್ಪಷ್ಪಪಡಿಸಿದರು.

ಅರವಿಂದ ಲಿಂಬಾವಳಿ ಕೋರ್ ಕಮಿಟಿಯಲ್ಲಿಲ್ಲ. ಶಾಸಕ ಸುಕುಮಾರ್ ಶೆಟ್ಟಿ ಊರಿನಲ್ಲೇ ಇರಲಿಲ್ಲ. ಆದರೆ ಮಾಧ್ಯಮಗಳು ಅವರಿಗೆ ಪಕ್ಷದ ಮೇಲೆ ಅಸಮಾಧಾನ ಇರುವುದಾಗಿ ಸುದ್ದಿ ಬಿತ್ತರಿಸುತ್ತಿವೆ ಎಂದು ಹೇಳುವ ಮೂಲಕ ಆಕ್ಷೇಪ ವ್ಯಕ್ತಪಡಿಸಿದರು.

150+ ಖಚಿತ: ಮುಂದಿನ ವಿಧಾನಸಭೆಯಲ್ಲಿ 150+ ಸೀಟು ಗಳಿಕೆ ನಮ್ಮ ಗುರಿಯಾಗಿದ್ದು, ಅದಕ್ಕಾಗಿ ಕಾರ್ಯಕರ್ತರು ಕೆಲಸ ಮಾಡಬೇಕು. ಪಕ್ಷವು ನೀಡಿದ ಜವಾಬ್ದಾರಿ ಸರಿಯಾಗಿ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ 150 ಕಿ.ಮೀ ಪಾದಯಾತ್ರೆ ಮತ್ತು ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಪ್ರಯುಕ್ತ ನಡೆಯುವ ಸಪ್ತಾಹ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ಇದೇ ವೇಳೆ ವಿನಂತಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೇಳಿದ್ದೆಲ್ಲವನ್ನೂ ಕೊಡುವ ಕಾಮಧೇನು. ಇಂತಹ ಮುಖ್ಯಮಂತ್ರಿ ಈ ಹಿಂದೆ ಬಂದಿಲ್ಲ. ರೈತರಿಗೆ ಪರಿಹಾರ ನೀಡಿದ್ದಾರೆ, ನೇಕಾರರಿಗೂ ನೆರವು ಒದಗಿಸಿದ್ದಾರೆ. ನೆರೆಯಿಂದ ಮನೆ ಕಳೆದುಕೊಂಡವರಿಗೆ ಐದು ಲಕ್ಷ ರೂ. ಪರಿಹಾರ ಘೋಷಿಸಿದ್ದು, ತಕ್ಷಣದ ಪರಿಹಾರವಾಗಿ 10,000 ರೂ. ನೀಡಿದ್ದಾರೆ. ಮನೆ ಕಳೆದುಕೊಂಡವರಿಗೆ ಬಾಡಿಗೆ ಮನೆಯ ವ್ಯವಸ್ಥೆ ಮಾಡಿದ್ದಾರೆ ಎಂದು ನಳಿನ್ ಹೇಳಿದರು.

ರಾಮ ಮಂದಿರ ನಿರ್ಮಾಣ ಸೇರಿದಂತೆ ಇನ್ನೂ ಕೆಲವು ಸಾಧನೆಗಳನ್ನು ಮಾಡಲು ಬಾಕಿ ಇದ್ದು, ಅವುಗಳನ್ನು ಸಾಧಿಸುವ ನಿಟ್ಟಿನಲ್ಲಿ ಸದಸ್ಯತ್ವವನ್ನು ವಿಸ್ತರಿಸಿ ಪಕ್ಷವನ್ನು ಇನ್ನಷ್ಟು ಬಲ ಪಡಿಸಲು ಪಕ್ಷದ ಪದಾಧಿಕಾರಿಗಳು ಸಹಕರಿಸಬೇಕು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಸ್ವಾಗತಿಸಿ ಪ್ರಸ್ತಾವನೆಗೈದರು. ಪಕ್ಷದ ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಸಹ ಪ್ರಭಾರಿ ಪ್ರತಾಪ ಸಿಂಹ ನಾಯಕ್ ವೇದಿಕೆಯಲ್ಲಿದ್ದರು.

ನೆರೆ ಪರಿಹಾರಕ್ಕೆ ಕೇಂದ್ರ ಸರಕಾರ ಗರಿಷ್ಠ ಮೊತ್ತ ಬಿಡುಗಡೆ ಮಾಡುವ ವಿಶ್ವಾಸವಿದೆ. ಸಂತ್ರಸ್ತರನ್ನು ಗುರುತಿಸುವ ಬಗ್ಗೆ ಅಧಿಕಾರಿಗಳನ್ನು ಮಾತ್ರ ನಂಬಿದರೆ ಆಗದು, ಪಕ್ಷದ ಪದಾಧಿಕಾರಿಗಳು ಕೂಡ ಕೆಲಸ ಮಾಡಬೇಕು. ನೆರೆ ಪರಿಹಾರದ ಬಗ್ಗೆ ಪ್ರತಿಪಕ್ಷದವರು ಆರೋಪ ಮಾಡುವುದು ಸಹಜ. ಅದಕ್ಕೆ ಚಿಂತೆ ಮಾಡುವ ಆವಶ್ಯಕತೆ ಇಲ್ಲ.

 - ಕೋಟ ಶ್ರೀನಿವಾಸ್ ಪೂಜಾರಿ,
ಬಂದರು, ಮೀನುಗಾರಿಕೆ ಮತ್ತು ಮುಜರಾಯಿ ಖಾತೆ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News