‘370ನೇ ವಿಧಿ ರದ್ದು; ಕಾಶ್ಮೀರದಿಂದ ಮುಸ್ಲಿಮರನ್ನು ಹೊರದೂಡುವ ತಂತ್ರ’

Update: 2019-09-11 15:28 GMT

ಮಂಗಳೂರು, ಸೆ.11: ಸಂವಿಧಾನದ 370ನೇ ವಿಧಿ ರದ್ದು ಪ್ರಕ್ರಿಯೆಯು ಹಿಂದೂ ಮುಸ್ಲಿಮರ ಮಧ್ಯೆ ದ್ವೇಷ ಭಾವನೆ ಹುಟ್ಟಿಸುವುದಲ್ಲದೆ, ಕಾಶ್ಮೀರದಿಂದ ಮುಸ್ಲಿಮರನ್ನು ಹೊರಗಟ್ಟುವ ಯೋಜನೆಯ ಭಾಗವಾಗಿವೂ ಆಗಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ತಿಳಿಸಿದ್ದಾರೆ.

ಸಂವಿಧಾನದ 370ನೇ ವಿಧಿ ರದ್ದು ಪಡಿಸಿದ ಕೇಂದ್ರ ಸರಕಾರದ ಕ್ರಮವನ್ನು ವಿರೋಧಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸಿಪಿಎಂ, ಸಿಪಿಐ ಪಕ್ಷಗಳ ಜಂಟಿ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಪ್ರದರ್ಶನ ಉದ್ದೇಶಿಸಿ ಅವರು ಮಾತನಾಡಿದರು.

ಸಂವಿಧಾನದ 370ನೇ ವಿಧಿಯ ಇತಿಹಾಸವು ಬಿಜೆಪಿ ಸರಕಾರದ ಬೆಂಬಲಿಗರಿಗೆ ಗೊತ್ತಿಲ್ಲ. ದೇಶ ವಿಭಜನೆ ಸಂದರ್ಭದಲ್ಲಿ ಜಮ್ಮುಕಾಶ್ಮೀರದ ರಾಜ ಹರಿಸಿಂಗ್ ಭಾರತ, ಪಾಕಿಸ್ತಾನ ಎರಡೂ ದೇಶಕ್ಕೂ ಸೇರಿಕೊಳ್ಳದೆ ಸ್ವತಂತ್ರವಾಗಿರಲು ಬಯಸಿದಾಗ ಅಲ್ಲಿನ ಜನತೆ ಶೇಕ್ ಅಬ್ದುಲ್ಲಾ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನೇತೃತ್ವದಲ್ಲಿ ರಾಜಸತ್ತೆ ಹಾಗೂ ಬ್ರಿಟಿಷ್ ವಸಾಹತುಶಾಹಿ ಎರಡನ್ನೂ ವಿರೋಧಿಸಿತ್ತು ಎಂದರು.

ದೇಶ ಸ್ವಾತಂತ್ರ್ಯ ಕಂಡ ಬೆನ್ನಿಗೆ ಕಾಶ್ಮೀರದ ಮೇಲೆ ಪಾಕಿಸ್ತಾನದ ಕಡೆಯಿಂದ ಸೈನ್ಯ ನುಗ್ಗಿ ಬಂದಾಗ ರಾಜ ಹರಿಸಿಂಗ್ ಅಂದಿನ ದೇಶದ ಪ್ರಧಾನಿ ಜವಾಹರಲಾಲ್ ನೆಹರೂ, ಗೃಹಮಂತ್ರಿ ವಲ್ಲಭ ಬಾಯಿ ಪಟೇಲ್ ಮತ್ತು ಶೇಕ್ ಅಬ್ದುಲ್ಲಾ ನಡುವೆ ನಡೆಸಿದ ಒಪ್ಪಂದದಂತೆ ಭಾರತಕ್ಕೆ ಸೇರಿಕೊಳ್ಳಲು ಕಾಶ್ಮೀರ ರಾಜ ಸಿದ್ದನಾದರು. ಆಗ ಮಾಡಿಕೊಂಡ ಒಪ್ಪಂದದಂತೆ ಮುಂದೆ ಸಂವಿಧಾನದಲ್ಲಿ 370 ನೇ ವಿಧಿಯನ್ನು ಕಲ್ಪಿಸಲಾಯಿತು ಎಂದರು.

ಇಂದಿನ ನರೇಂದ್ರ ಮೋದಿ ನೇತೃತ್ವದ ಸರಕಾರವು ಅಲ್ಲಿನ ಜನತೆಯನ್ನು ತಿರಸ್ಕರಿಸಿ ಅವರನ್ನು ಅವಮಾನಿಸಿ ಅವರಿಗೆ ವಾಗ್ದಾನದಂತೆ ನೀಡಿದ ಸ್ವಾಯತ್ತೆ ಹಕ್ಕನ್ನು ಕಿತ್ತುಕೊಂಡಿರುವುದು ಸಂವಿಧಾನ ವಿರೋಧಿ ನೀತಿಯಾಗಿದೆ. ಇದು ಪ್ರಜಾಪ್ರಭುತ್ವದ ತತ್ವಕ್ಕೂ ವಿರುದ್ಧವಾಗಿದೆ ಎಂದು ಟೀಕಿಸಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ಮಾತನಾಡಿ, ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳು ಇಲ್ಲಿಯವರೆಗೂ ನಡೆಯುತ್ತಾ ಬಂದಿದ್ದವು. ಕೊನೆಗೆ ಬಿಜೆಪಿ ಮತ್ತು ಪಿಡಿಪಿ ಪಕ್ಷಗಳೇ ಮೈತ್ರಿಕೂಟ ಮಾಡಿಕೊಂಡು ಜಮ್ಮು ಕಾಶ್ಮೀರದಲ್ಲಿ ರಾಜ್ಯಾಡಳಿತ ನಡೆಸುತ್ತಿದ್ದವು. ಈಗಿನ ಕೇಂದ್ರ ಸರಕಾರ ಕಾಶ್ಮೀರದ ಜನತೆಯ ಜೊತೆಗೆ ಚರ್ಚೆ ನಡೆಸದೆ ಏಕಾಏಕಿ 370ನೇ ವಿಧಿ ರದ್ದುಪಡಿಸಿದೆ. ಜನರನ್ನು ಭೀತಿಗೊಳಿಸುವ ರೀತಿಯಲ್ಲಿ ಜನಜೀವನವನ್ನೇ ನಿಶ್ಚಲಗೊಳಿಸಿದೆ ಎಂದು ಹೇಳಿದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್‌ಕುಮಾರ್ ಬಜಾಲ್ ಮಾತನಾಡಿ, ಇವತ್ತು ದೇಶಪ್ರೇಮದ ಬಗ್ಗೆ ಉದ್ದುದ್ದ ಮಾತನಾಡುವ ಬಿಜೆಪಿ ಸಂಘಪರಿವಾರದವರಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಇತಿಹಾಸವಿದೆಯೇ? ಸಂವಿಧಾನದ ಆಶಯವನ್ನು ಮಣ್ಣುಪಾಲು ಮಾಡುವವರು, ಜಾತ್ಯತೀತ ತತ್ವಕ್ಕೆ ಕೊಡಲಿ ಪೆಟ್ಟು ಕೊಡುವವರು, ಪ್ರಜಾಪ್ರಭುತ್ವದ ಅಡಿಗಲ್ಲನ್ನೇ ಅಲುಗಾಡಿಸುವವರು ದೇಶಪ್ರೇಮ ಹಾಗೂ ದೇಶದ್ರೋಹಕ್ಕೆ ವ್ಯಾಖ್ಯಾನ ನೀಡುತ್ತಿರುವುದು ತೀರಾ ಹಾಸ್ಯಾಸ್ಪದವಾಗಿದೆ ಎಂದು ವ್ಯಂಗ್ಯವಾಡಿದರು.

ಪ್ರತಿಭಟನಾ ಪ್ರದರ್ಶನದಲ್ಲಿ ಸಿಪಿಐ ಜಿಲ್ಲಾ ಮುಖಂಡರಾದ ಎಚ್.ವಿ.ರಾವ್, ಸೀತಾರಾಮ ಬೇರಿಂಜ, ಕರುಣಾಕರ್, ಪ್ರಭಾಕರ ರಾವ್, ಭಾರತಿ ಶಂಭೂರು, ಸಿಪಿಎಂ ಜಿಲ್ಲಾ ನಾಯಕರಾದ ಜೆ.ಬಾಲಕೃಷ್ಣ ಶೆಟ್ಟಿ, ಕೃಷ್ಣಪ್ಪ ಸಾಲ್ಯಾನ್, ವಾಸುದೇವ ಉಚ್ಚಿಲ್, ಜಯಂತಿ ಶೆಟ್ಟಿ, ದಯಾನಂದ ಶೆಟ್ಟಿ, ಮನೋಜ್ ವಾಮಂಜೂರು, ಬಶೀರ್ ಪಂಜಿಮೊಗರು, ದಿನೇಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News