ಬಿಜೆಪಿ ನಾಯಕ ಚಿನ್ಮಯಾನಂದ ವಿರುದ್ಧ ಸಾಕ್ಷ್ಯಾಧಾರ ಪೆನ್ ಡ್ರೈವ್‌ನಲ್ಲಿದೆ: ಸಂತ್ರಸ್ತೆ

Update: 2019-09-11 15:51 GMT

ಹೊಸದಿಲ್ಲಿ,ಸೆ.11: ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಚಿನ್ಮಯಾನಂದ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಮಾಡಿರುವ ಕಾನೂನು ವಿದ್ಯಾರ್ಥಿನಿ,ಆರೋಪವನ್ನು ಪುಷ್ಟೀಕರಿಸುವ ಸ್ಫೋಟಕ ವೀಡಿಯೊ ಸಾಕ್ಷ್ಯಾಧಾರವು ತನ್ನ ಬಳಿಯಿದ್ದು,ಅದನ್ನು ತನ್ನ ಸ್ನೇಹಿತೆಯೋರ್ವಳು ಪೆನ್ ಡ್ರೈವ್‌ನಲ್ಲಿ ಪೊಲೀಸರಿಗೆ ಹಸ್ತಾಂತರಿಸಿದ್ದಾಳೆ ಎಂದು ತಿಳಿಸಿದ್ದಾಳೆ.

 ಸ್ನೇಹಿತೆಯು ಸರ್ವೋಚ್ಚ ನ್ಯಾಯಾಲಯವು ನೇಮಿಸಿರುವ ವಿಶೇಷ ತನಿಖಾ ತಂಡ (ಸಿಟ್)ಕ್ಕೆ ಈ ಪೆನ್ ಡ್ರೈವನ್ನು ಒಪ್ಪಿಸಿದ್ದಾಳೆ. ಸಿಟ್ ಸಂತ್ರಸ್ತೆಯನ್ನು 15 ಗಂಟೆಗಳಿಗೂ ಅಧಿಕ ಸಮಯ ವಿಚಾರಣೆಗೊಳಪಡಿಸಿತ್ತು.

ಕಳೆದ ವರ್ಷ ಚಿನ್ಮಯಾನಂದ ಕಾನೂನು ಕಾಲೇಜಿನಲ್ಲಿ ಪ್ರವೇಶ ಪಡೆಯಲು ತಾನು ಅವನನ್ನು ಸಂಪರ್ಕಿಸಿದ್ದೆ. ತನ್ನನ್ನು ಕಾಲೇಜಿಗೆ ಸೇರಿಸಿಕೊಂಡಿದ್ದ ಅವನು ಕಾಲೇಜು ಲೈಬ್ರರಿಯಲ್ಲಿ ಉದ್ಯೋಗವನ್ನೂ ನೀಡಿದ್ದ. ಅವನ ಸಲಹೆಯಂತೆ ತಾನು ಕಾಲೇಜಿನ ಹಾಸ್ಟೆಲ್‌ಗೆ ಸೇರ್ಪಡೆಗೊಂಡಿದ್ದೆ. ಅದೊಂದು ದಿನ ಚಿನ್ಮಯಾನಂದ ತನ್ನನ್ನು ಕರೆದು ತಾನು ಸ್ನಾನ ಮಾಡುತ್ತಿದ್ದಾಗ ತೆಗೆದಿದ್ದ ವೀಡಿಯೊವೊಂದನ್ನು ತೋರಿಸಿದ್ದ ಮತ್ತು ಅದನ್ನು ಬೆದರಿಕೆಯ ಅಸ್ತ್ರವನ್ನಾಗಿ ಬಳಸಿಕೊಂಡು ತನ್ನ ಮೇಲೆ ಅತ್ಯಾಚರವೆಸಗಿದ್ದ ಎಂದು ಯುವತಿ ಕಳೆದ ವಾರ ಪೊಲೀಸರು ದಾಖಲಿಸಿಕೊಂಡಿರುವ ದೂರಿನಲ್ಲಿ ಆರೋಪಿಸಿದ್ದಾಳೆ.

ತನ್ನ ಮೇಲಿನ ಅತ್ಯಾಚಾರದ ವೀಡಿಯೊವನ್ನೂ ಚಿನ್ಮಯಾನಂದ ಚಿತ್ರೀಕರಿಸಿದ್ದು,ತನ್ನನ್ನು ಬ್ಲಾಕ್ ಮೇಲ್ ಮಾಡಲು ಅದನ್ನು ಬಳಸುತ್ತಿದ್ದ. ಸುಮಾರು ಒಂದು ವರ್ಷ ಅವರು ಲೈಂಗಿಕ ದೌರ್ಜನ್ಯ ನಡೆಸಿದ್ದ. ಈ ವರ್ಷದ ಆರಂಭದಲ್ಲಿ ತಾನು ಅವರ ಕೃತ್ಯವನ್ನು ಚಿತ್ರೀಕರಿಸಲು ಆರಂಭಿಸಿದ್ದು,ಇದಕ್ಕಾಗಿ ತನ್ನ ಕನ್ನಡಕದಲ್ಲಿ ಕ್ಯಾಮರಾ ಅಳವಡಿಸಿಕೊಂಡಿದ್ದೆ ಎಂದು ಆಕೆ ತಿಳಿಸಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News