ಅಧಿಕ ಭಾರ ಸಾಗಾಟ: ಟ್ರಕ್ ಚಾಲಕನಿಗೆ 1.41 ಲಕ್ಷ ರೂ. ದಂಡ!

Update: 2019-09-11 15:59 GMT

ಹೊಸದಿಲ್ಲಿ, ಸೆ.11: ಪ್ರಮಾಣಕ್ಕಿಂತ ಹೆಚ್ಚು ಭಾರ ಹೊತ್ತ ಮತ್ತು ನೋಂದಣಿ ಪ್ರಮಾಣ ಪತ್ರ ಹಾಗೂ ಪರವಾನಿಗೆ ನಿಯಮಗಳನ್ನು ಉಲ್ಲಂಘಿಸಿದ ರಾಜಸ್ಥಾನದ ಟ್ರಕ್ ಚಾಲಕನಿಗೆ ನೂತನ ಮೋಟರ್ ವಾಹನ ಕಾಯ್ದೆಯನ್ವಯ ದಿಲ್ಲಿ ಸಂಚಾರಿ ಪೊಲೀಸರು 1.41 ಲಕ್ಷ ರೂ. ದಂಡ ವಿಧಿಸಿದ್ದಾರೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ.

“ಸೆಪ್ಟಂಬರ್ 5ರಂದು ನನ್ನ ಟ್ರಕ್ ಚಾಲಕ ಗ್ರಾಹಕರೊಬ್ಬರಿಗೆ ನೀಡಲು ಸಿಲಿಕ ಮರಳು ಸಾಗಿಸುತ್ತಿದ್ದ ವೇಳೆ ದಿಲ್ಲಿಯಲ್ಲಿ ದುಬಾರಿ ದಂಡ ವಿಧಿಸಿದ್ದಾರೆ. ಈ ಮೊತ್ತದ ವ್ಯವಸ್ಥೆ ಮಾಡಲು ನಮಗೆ ಐದು ದಿನಗಳು ಬೇಕಾಯಿತು ಮತ್ತು ನಾವು ಸೆಪ್ಟಂಬರ್ 9ರಂದು ದಂಡ ಪಾವತಿಸಿದ ನಂತರ ವಾಹನವನ್ನು ನಮಗೆ ನೀಡಿದರು” ಎಂದು ಟ್ರಕ್ ಮಾಲಕ ರಾಜಸ್ಥಾನದ ಬಿಕನೇರ್‌ನ ಹರ್ಮನ್ ರಾಮ್ ಭಂಭು ತಿಳಿಸಿದ್ದಾರೆ.

ಟ್ರಕ್ ಚಾಲಕ ಹೇಳುವಂತೆ, ಸಂಚಾರಿ ಪ್ರಾಧಿಕಾರ ಮೊದಲ ಒಂದು ಟನ್‌ಗೆ 20,000ರೂ. ದಂಡ ವಿಧಿಸಿತ್ತು ಮತ್ತು ಪ್ರತಿ ಹೆಚ್ಚುವರಿ ಟನ್‌ಗೆ ತಲಾ 2,000ರೂ. ದಂಡ ವಿಧಿಸಿತ್ತು. ಇದರ ಒಟ್ಟು ಮೊತ್ತ 48,000ರೂ. ಇನ್ನು ನೋಂದಣಿ ಪ್ರಮಾಣ ಪತ್ರ ಮತ್ತು ಪರವಾನಿಗೆ ಉಲ್ಲಂಘನೆಗೆ ತಲಾ 10,000ರೂ. ದಂಡ ವಿಧಿಸಿದ್ದಾರೆ. ಹಾಗಾಗಿ ದಂಡದ ಒಟ್ಟು ಮೊತ್ತ 70,800ರೂ. ಆಗಿತ್ತು. ಇಷ್ಟೇ ಮೊತ್ತದ ದಂಡವನ್ನು ಮಾಲಕರ ಮೇಲೂ ಹಾಕಿದ ಪರಿಣಾಮ ಅಂತಿಮ ಮೊತ್ತ 1,41,600ರೂ. ತಲುಪಿದೆ. ರಕ್ಷೆ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಜುಲೈಯಲ್ಲಿ ಮೋಟರ್ ವಾಹನ (ತಿದ್ದುಪಡಿ) ಮಸೂದೆ, 2019ನ್ನು ಸಂಸತ್‌ನಲ್ಲಿ ಅಂಗೀಕರಿಸಲಾಯಿತು. ಅದರಂತೆ, ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ಮೇಲೆ ದುಬಾರಿ ದಂಡ ವಿಧಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor