ಆಂಧ್ರ ಮೂಲದ ಬಾಲಕ ಅಪಹರಣ: ರಕ್ಷಿಸಿದ ಮಂಗಳೂರು ಚೈಲ್ಡ್‌ಲೈನ್

Update: 2019-09-11 16:29 GMT

ಮಂಗಳೂರು, ಸೆ.11: ಅಪಹರಣಕ್ಕೊಳಗಾದ ಆಂಧ್ರಪ್ರದೇಶದ ಏಳು ವರ್ಷದ ಬಾಲಕನನ್ನು ಮಾರಾಟ ಮಾಡಲೆತ್ನಿಸಿದಾಗ ‘ಮಂಗಳೂರು ಚೈಲ್ಡ್‌ಲೈನ್’ ಬಾಲಕನನ್ನು ರಕ್ಷಿಸಿದ ಘಟನೆ ಬೆಳಕಿಗೆ ಬಂದಿದೆ.

ಪುತ್ತೂರು ತಾಲೂಕಿನ ಬಲ್ನಾಡು ಸಮೀಪ ಆಂಧ್ರಮೂಲದ ಮಹಿಳೆಯು ಏಳು ವರ್ಷ ಪ್ರಾಯದ ಬಾಲಕನನ್ನು ಅಕ್ರಮವಾಗಿ ಸಾಕುತ್ತಿರುವ ಬಗ್ಗೆ ಮತ್ತು ಸ್ಥಳೀಯ ನಿವಾಸಿ ಮಂಜುನಾಥ ಎಂಬಾತನಿಗೆ ಮಾರಲು ಯತ್ನಿಸಿದ್ದರು ಎಂದು ತಿಳಿದುಬಂದಿದೆ.

ಈ ಕುರಿತು ಸಂಶಯಗೊಂಡ ಬಲ್ನಾಡು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಮಹಿಳಾ ಸಾಂತ್ವನ ಕೇಂದ್ರದ ಸಿಬ್ಬಂದಿಯು ತಾಯಿಯ ಜೊತೆಗೆ ಬಾಲಕನನ್ನು ಮಂಗಳೂರಿನ ಚೈಲ್ಡ್ ಲೈನ್-1098 ರ ಕಚೇರಿಗೆ ಕರೆದುಕೊಂಡು ಬಂದಿದ್ದರು.

ಈ ಸಂದರ್ಭ ಚೈಲ್ಡ್‌ಲೈನ್ ನಿರ್ದೇಶಕರ ನಿರ್ದೇಶನ ಮೇರೆಗೆ ವೈದ್ಯರು ಬಾಲಕನಿಗೆ ಆಪ್ತ ಸಮಾಲೋಚನೆ ನಡೆಸಿದಾಗ ಬಾಲಕನು ತಾನು ಆಂಧ್ರಪ್ರದೇಶದ ಓಂಗೋಳ ಹತ್ತಿರದ ಸೀತಾರಾಮ್‌ಪುರದ ಬಾಲಕನಾಗಿದ್ದು, ಬೆಂಗಳೂರಿನ ಯಶವಂತ ಪುರದ ರೈಲ್ವೆ ನಿಲ್ದಾಣದಲ್ಲಿ ಒಬ್ಬಂಟಿಯಾಗಿ ಮಲಗಿರುವಾಗ ಮಹಿಳೆಯು ತನ್ನನ್ನು ಕರೆದುಕೊಂಡು ಬಂದಿರುವುದಾಗಿ ಮಾಹಿತಿ ನೀಡಿದ್ದಾನೆ.

ಬಾಲಕ ನೀಡಿರುವ ಮಾಹಿತಿ ಪ್ರಕಾರ ಚೈಲ್ಡ್‌ಲೈನ್ ತಂಡವು ಪುತ್ತೂರಿನ ಸಂಪ್ಯ ಪೊಲೀಸ್ ಠಾಣೆಯಲ್ಲಿ ಬಾಲಕನ ಅಪಹರಣ ಮಾಡಿದ ಮಹಿಳೆ ವಿರುದ್ಧ ದೂರು ನೀಡಿದ್ದಾರೆ. ಬಾಲಕನನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಾಜರು ಪಡಿಸಿ ಸೂಕ್ತ ಪುನರ್ವಸತಿ ಕಲ್ಪಿಸಲಾಗಿದೆ ಎಂದು ಮಂಗಳೂರು ಚೈಲ್ಡ್‌ಲೈನ್ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News