ಬೆಳ್ತಂಗಡಿ : 15ಲಕ್ಷ ರೂ ವೆಚ್ಚದಲ್ಲಿ ಅನಾರು ಸೇತುವೆಗೆ ಸ್ಟೀಲ್ ಬ್ರಿಡ್ಜ್- ಲೋಕೋಪಯೋಗಿ ಇಲಾಖೆ

Update: 2019-09-11 16:36 GMT

ಬೆಳ್ತಂಗಡಿ : ಕಳೆದ ಒಂದು ತಿಂಗಳ ಹಿಂದೆ ಸುರಿದ ನೆರೆಹಾವಳಿಗೆ ಕೊಚ್ಚಿಹೋದ ಅನಾರು ಸೇತುವೆಗೆ ಸುಮಾರು 15ಲಕ್ಷ ರೂ ವೆಚ್ಚದಲ್ಲಿ ಸ್ಟೀಲ್ ಬ್ರಿಡ್ಜ್ ಅಳವಡಿಸಲು ಲೋಕೋಪಯೋಗಿ ಇಲಾಖೆ ಪರಿಶೀಲನೆ ನಡೆಸಿದ್ದು ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾದ ಕೂಡಲೇ ಇದರ ನಿರ್ಮಾಣ ಕಾರ್ಯ ನಡೆಸಲಿದ್ದಾರೆ.

ಇದೀಗ ಅನಾರಿಗೆ ಶಾಸಕ ಹರೀಶ್ ಪೂಂಜಾರವರ ಸೂಚನೆಯಂತೆ ಸ್ಟೀಲ್ ಬ್ರಿಡ್ಜ್ ಅಳವಡಿಕೆಗೆ ತಯಾರಿ ನಡೆಸಲಾಗಿದ್ದು ಸುಮಾರು 50 ಮೀಟರ್ ಉದ್ದ ಹಾಗೂ ನಾಲ್ಕು ಅಡಿ ಅಗಲದ ಬ್ರಿಡ್ಜ್ ನಿರ್ಮಾಣವಾಗಲಿದ್ದು ಇದರಲ್ಲಿ ಪಾದಾಚಾರಿಗಳಿಗೆ ಹಾಗೂ ದ್ವೀಚಕ್ರ ವಾಹನಗಳಿಗೆ ಹೋಗಲು ಅನುಕೂಲವಾಗಲಿದೆ.  ಇತೀಚೆಗೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನೀರಿನ ಅಂತರ ಹೆಚ್ಚಾಗಿದ್ದು ಇದರಿಂದ ಕಾಮಗಾರಿ ನಡೆಸಲು ತೊಂದರೆಯಾಗುತ್ತಿದೆ. ನೀರು ಕಡಿಮೆಯಾದ ತಕ್ಷಣ ಸ್ಟೀಲ್ ಬ್ರಿಡ್ಜ್ ಅಳವಡಿಕೆ ಕಾಮಗಾರಿ ನಡೆಯಲಿದೆ.

ಈ ಪ್ರದೇಶದಲ್ಲಿ ಅನಾರು, ನಲ್ಲಿಲು, ಮುಗುಳಿದಡ್ಡ ಹೀಗೆ ಮೂರು ಕಡೆಗಳಲ್ಲಿ ಒಟ್ಟು ಸುಮಾರು ಎಂಬತ್ತಕ್ಕಿಂತಲೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು ಇವರಿಗೆಲ್ಲರಿಗೂ ಏಕೈಕ ಆಶ್ರಯವಾಗಿದ್ದುದು ಅನಾರಿನಲ್ಲಿರುವ ಸೇತುವೆಯಾಗಿತ್ತು. ಈ ಸೇತುವೆಯ ಮೂಲಕವಾಗಿ ಇವರು ಸುಲಭವಾಗಿ ಕಕ್ಕಿಂಜೆಗೆ ಬಂದು ಹೋಗುತ್ತಿದ್ದರು, ಕೂಲಿ ಕೆಲಸಕ್ಕೆ ಹೋಗುವವರು ಶಾಲಾ ಕಾಲೇಜಿಗೆ ಹೋಗುವ ಮಕ್ಕಳು ಇದನ್ನೇ ಆಶ್ರಯಿಸಿದ್ದರು. ಇದೀಗ ಸೇತುವೆ ಕೊಚ್ಚಿ ಹೋದ ಬಳಿಕ ಇವರು ಹೊರ ಜಗತ್ತಿನೊಂದಿಗೆ ಸಂಪಕ್ವನ್ನು ಕಳೆದುಕೊಂಡಿದ್ದರು. ನದಿಯಲ್ಲಿ ನೀರು ಇಳಿದಾಗ ಮಾತ್ರ ಇವರು ನದಿಯನ್ನು ದಾಟಿ ಹೊರಗೆ ಬರುತ್ತಿದ್ದರು. ಸೇತುವೆ ನಾಶದಿಂದಾಗಿ ಇಲ್ಲಿನ ಮಕ್ಕಳು ಕಳೆದ ಒಂದು ತಿಂಗಳಿನಿಂದ ಶಾಲೆಗೆ ಹೋಗಲೂ ಕಷ್ಟ ಅನುಭವಿಸಬೇಕಾಗಿ ಬಂದಿತ್ತು. ಇದೀಗ ಉದ್ದೇಶಿತ ಸ್ಟೀಲ್ ಬ್ರಿಡ್ಜ್ ನಿರ್ಮಾಣವಾದರೆ ಜನರ ಸಮಸ್ಯೆಗೆ ಒಂದಿಷ್ಟು ಪರಿಹಾರ ಕಂಡಂತಾಗಬಹುದಾಗಿದೆ.

ಅನಾರು ಸೇತುವೆ ಹಾನಿಗೊಳಗಾದ ಸ್ಥಳದಲ್ಲಿ ಸುಮಾರು 15ಲಕ್ಷ ರೂ ವೆಚ್ಚದಲ್ಲಿ ಸ್ಟೀಲ್ ಬ್ರಿಡ್ಜ್ ಸೇತುವೆ ನಿರ್ಮಾಣವಾಗಲಿದ್ದು ನದಿಯಲ್ಲಿ ನೀರಿನ ಅಂತರ ಹೆಚ್ಚಿರುವುದರಿಂದ ಕಾಮಗಾರಿ ನಡೆಸಲು ಸಾಧ್ಯವಾಗುತ್ತಿಲ್ಲ. ನೀರು ಕಡಿಮೆಯಾದ ತಕ್ಷಣ ಕಾಮಗಾರಿ ಪ್ರಾರಂಭಿಸಲಿದ್ದು ಶೀಘ್ರವೇ ಈ ಭಾಗದ ಜನರ ಸಮಸ್ಯೆ ಪರಿಹಾರವಾಗಲಿದೆ.

ಶಿವಪ್ರಸಾದ್ ಅಜಿಲ
ಸಹಾಯಕ ಕಾರ್ಯಪಾಲಕ ಅಭಿಯಂತರರು, ಪಿಡಬ್ಲೂಡಿ ಬೆಳ್ತಂಗಡಿ.

ಇಲಾಖಾಧಿಕಾರಿಗಳು ಬಂದು ಪರಿಶೀಲನೆ ನಡೆಸಿ ಹೋಗಿದ್ದಾರೆ, ನೀರು ಕಡಿಮೆಯಾದ ಕೂಡಲೆ ಸ್ಟೀಲ್ ಬ್ರಿಡ್ಜ್ ಮಾಡಿಕೊಡುವುದಾಗಿ ಹೇಳಿ ದ್ದಾರೆ, ಇದೀಗ ನದಿಯಲ್ಲಿ ನೀರು ಕಡಿಮೆಯಾಗಿದೆ. ಈಗ ಕಾಮಗಾರಿ ನಡೆಸಬಹುದಾಗಿದ್ದು ಕೂಡಲೇ ಇಲಾಖೆಯವರು ಇದನ್ನು ಮಾಡಿಕೊಡಬೇಕು. ಇದೀಗ ತಾತ್ಕಾಲಿಕವಾಗಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಲು ಶಾಸಕರ ಸಹಕಾರದಿಂದ ಜೀಪೊಂದು ಬರುತ್ತಿದೆ. ಅದು ಕಷ್ಟ ಪಟ್ಟು  ಓಡಾಡುತ್ತಿದೆ.  ಇದು ಹೆಚ್ಚುದಿನ ಸಾಧ್ಯವಿಲ್ಲ ತಾತ್ಕಾಲಿಕ ಸೇತುವೆಯಾದರೂ ಆದರೆ ನಮ್ಮ ಸಮಸ್ಯೆಗೆ ಸಾಕಷ್ಟು ಪರಿಹಾರ ಸಿಗಲಿದೆ. 
- ಕೃಷ್ಣಪ್ಪ ಮಲೆಕುಡಿಯ, ಅನಾರು ನಿವಾಸಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News