ಸಸಿಕಾಂತ್ ಸೆಂಥಿಲ್‍ರವರು ರಾಜೀನಾಮೆ ಹಿಂಪಡೆಯಲಿ: ಅಂಬೇಡ್ಕರ್ ಫೋರಂ ಫಾರ್ ಸೋಷಿಯಲ್ ಜಸ್ಟೀಸ್ ಒತ್ತಾಯ

Update: 2019-09-11 16:51 GMT

ಬಂಟ್ವಾಳ, ಸೆ. 11: ದ.ಕ. ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಅವರು ದಕ್ಷ, ಪ್ರಾಮಾಣಿಕ ಐಎಎಸ್ ಅಧಿಕಾರಿ. ಜಿಲ್ಲೆಯ ಎಲ್ಲ ವರ್ಗದ ಜನರನ್ನು ಸಮಾನ ಮನೋಭಾವದಿಂದ ನೋಡುತ್ತಿದ್ದರು. ಅವರ  ರಾಜೀನಾಮೆ ನಮಗೆ ಆಘಾತವನ್ನುಂಟು ಮಾಡಿದ್ದು ಅವರು ತನ್ನ ನಿರ್ಧಾರ ವನ್ನು ವಿಮರ್ಶಿಸಿ  ರಾಜೀನಾಮೆಯನ್ನು ಹಿಂಪಡೆದುಕೊಳ್ಳಬೇಕೆಂದು ಡಿ.ಕೆ. ಡಿಸ್ಟ್ರಿಕ್ ಅಂಬೇಡ್ಕರ್ ಫೋರಂ ಫಾರ್ ಸೋಷಿಯಲ್ ಜಸ್ಟೀಸ್‍ನ ಅಧ್ಯಕ್ಷ ಭಾನುಚಂದ್ರ ಕೃಷ್ಣಾಪುರ ಆಗ್ರಹಿಸಿದ್ದಾರೆ.

ಬುಧವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್‍ಕ್ಲಬ್‍ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವೇದನಾ ಶೀಲ ಅಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಅವರು ಬಡವರನ್ನು, ದಲಿತರನ್ನು ತನ್ನ ಪಕ್ಕ ಕುಳ್ಳಿರಿಸಿ ಸಾವಧಾನವಾಗಿ ಅವರ ಅಹವಾಲನ್ನು ಆಲಿಸುತ್ತಿದ್ದರು.

ಸಮಸ್ಯೆಯನ್ನು ಪರಿಹರಿಸಿ ಕೊಡುತ್ತಿದ್ದರು ಮಾತ್ರವಲ್ಲದೆ ಆತ್ಮಸೈರ್ಯವನ್ನು ತುಂಬಿತ್ತಿದ್ದರು. ನಿಷ್ಟಕ್ಷಪಾತವಾದ ಅಧಿಕಾರಿಗಳಿಗೆ ಬಾಹ್ಯ ಒತ್ತಡ ಗಳಿರುವುದು ಸಾಮಾನ್ಯ. ದಕ್ಷ, ಪ್ರಾಮಾಣಿಕ ಅಧಿಕರಿಗಳು ಕರ್ತವ್ಯದಿಂದ ವಿಮುಖರಾಗಬಾರದು. ಆತುರದ ನಿರ್ಧಾರ ಕೈಗೊಳ್ಳಬಾರದು ಇದರಿಂದ ಸಮಾಜಕ್ಕೆ ದೊಡ್ಡ ನಷ್ಟವಾಗುತ್ತದೆ. ದಕ್ಷ ಅಧಿಕಾರಿಗಳೇ ರೀತಿ ರಾಜೀನಾಮೆ ನೀಡಿದರೆ, ಆ ಸ್ಥಾನವನ್ನು ತುಂಬುವರಾರು ? ಎಂದು ಪ್ರಶ್ನಿಸಿದರು.

ಸಸಿಕಾಂತ್ ಸೆಂಥಿಲ್ ಮಾತ್ರವಲ್ಲದೆ ಅನೇಕ ಅಧಿಕಾರಿಗಳು ಇಂದು ಉಸಿರು ಕಟ್ಟಿಸುವ ವಾತವಾರಣದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ರಾಘವೇಂದ್ರ ಸುರುಳಿಮೂಲೆ, ಕೃಷ್ಣಪ್ಪ ಪುದ್ದೋಟ್ಟು, ರಾಮ ತುಂಬೆ, ನಾರಾಯಣ ನಂದಾವರ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News