ಬೀತಲಪ್ಪು ಅಂಗನವಾಡಿ ಕೇಂದ್ರದಲ್ಲಿ ದಲಿತ ಮಕ್ಕಳ ಮೇಲೆ ತಾರತಮ್ಯ ಧೋರಣೆ ಆರೋಪ: ಸಿಡಿಪಿಒಗೆ ದೂರು

Update: 2019-09-11 17:04 GMT

ಉಪ್ಪಿನಂಗಡಿ: 34ನೇ ನೆಕ್ಕಿಲಾಡಿ ಗ್ರಾ.ಪಂ.ನ ಬೀತಲಪ್ಪು ಅಂಗನವಾಡಿ ಕೇಂದ್ರದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಪುಟಾಣಿಗಳ ಮೇಲೆ ತಾರತಮ್ಯ ನೀತಿ ಅನುಸರಿಸಲಾಗುತ್ತಿದ್ದು, ಈ ಮೂಲಕ ದಲಿತ ಸಮುದಾಯಕ್ಕೆ ಸೇರಿದ ಮಕ್ಕಳ ಹಕ್ಕುಗಳಿಗೆ ಚ್ಯುತಿ ತರಲಾಗುತ್ತಿದೆ ಎಂಬ ಗಂಭೀರ ಆರೋಪವನ್ನು ಅಂಗನವಾಡಿ ಮಕ್ಕಳ ಪೋಷಕರು ಹಾಗೂ ಬೀತಲಪ್ಪು ದಲಿತರ ಕಾಲನಿಯ ನಾಗರಿಕರು ಮಾಡಿದ್ದು, ಈ ಬಗ್ಗೆ ಪುತ್ತೂರು ಮಕ್ಕಳ ಕಲ್ಯಾಣ ಯೋಜನಾಧಿಕಾರಿಗೆ ದೂರು ನೀಡಿದ್ದಾರೆ.

ಅಂಗನವಾಡಿ ಕಾರ್ಯಕರ್ತೆ ಬೇಬಿ ಹಾಗೂ ಸಹಾಯಕಿ ಮೀನಾಕ್ಷಿ ಅವರು ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಸಿಡಿಪಿಒ ಅವರಿಗೆ ದೂರು ನೀಡಿರುವ ಅವರು, ಪರಿಶಿಷ್ಟ ಜಾತಿಗೆ ಸೇರಿದ ಮಗುವೊಂದು ಅಂಗನವಾಡಿಯಲ್ಲಿ ಮೂತ್ರ ಮಾಡಿತೆಂದುಕೊಂಡು ಮರುದಿನ ಬೆಡ್‍ಶೀಟನ್ನು ಆ ಮಗುವಿನ ತಾಯಿಯನ್ನು ಕರೆದು ಒಗೆಸಿದ್ದಾರೆ. ಅದಾದ ಬಳಿಕ ಮಧ್ಯಾಹ್ನ ಸಮಯದಲ್ಲಿ ಆ ಮಗುವನ್ನು ಕರೆದುಕೊಂಡು ಬರಲು ತಾಯಿ ಅಂಗನವಾಡಿಗೆ ಬಂದಾಗ ಆ ಮಗುವನ್ನು ಅಮಾನವೀಯವಾಗಿ ಗೋಣಿ ಚೀಲವೊಂದರಲ್ಲಿ ಮಲಗಿಸಲಾಗಿತ್ತು. ಬಾಕಿ ಉಳಿದ ಮಕ್ಕಳನ್ನು ಬೆಡ್ ಶೀಟ್‍ನಲ್ಲಿ ಮಲಗಿಸಿ, ತನ್ನ ಮಗುವನ್ನು ಗೋಣಿ ಚೀಲದಲ್ಲಿ ಮಲಗಿಸಿದ್ಯಾಕೆ ಎಂದು ಮಗುವಿನ ತಾಯಿ ಪ್ರಶ್ನಿಸಿದಾಗ, ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ, ನೀವು ಮಗುವನ್ನು ಕರೆದುಕೊಂಡು ಹೋಗಲು ಮಾಮೂಲಿ ಸಮಯಕ್ಕೆ ಬರುವ ಬದಲು ಬೇಗ ಬಂದಿದ್ಯಾಕೆ ಎಂದು ಮಗುವಿನ ತಾಯಿಯನ್ನೇ ದಬಾಯಿಸಿ ಕಳುಹಿಸಿದ್ದಾರೆ. ಆ ಬಳಿಕ ಆ ಮಗು ಅಂಗನವಾಡಿಗೆ ಹೋಗಲು ಕೂಡಾ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದ್ದಾರೆ.

ಇದಲ್ಲದೆ, ಇದಕ್ಕೂ ಮೊದಲು ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯೋರ್ವರು 'ಮಾತೃ ಪೂರ್ಣ' ಯೋಜನೆಯಡಿ ಬೀತಲಪ್ಪು ಅಂಗನವಾಡಿಗೆ ಮಧ್ಯಾಹ್ನ ಊಟಕ್ಕಾಗಿ ತೆರಳುತ್ತಿದ್ದರು. ಅದೊಂದು ದಿನ ಊಟದ ಸಂದರ್ಭ ಅನ್ನ ಬೇಕು ಎಂದು ಅಲ್ಲಿನ ಸಹಾಯಕಿ ಅವರನ್ನು `ಹೆಲ್ಪರ್‍ರೇ' ಎಂದು ಸಂಭೋಧಿಸಿ ಕರೆದಿದ್ದಕ್ಕೆ ಆ ಗರ್ಭೀಣಿ ಮಹಿಳೆಯನ್ನು ಅಲ್ಲಿನ ಸಹಾಯಕಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ನನ್ನನ್ನು ಹಾಗೆ ಕರೆಯಬಾರದು. ಟೀಚರ್ ಎಂದು ಅಥವಾ ಹೆಸರಿಡಿದು ಕೂಗಬೇಕು ಎಂದು ಹೇಳಿದ್ದಲ್ಲದೆ ಹೀಯಾಳಿಸಿ ಮಾತನಾಡಿದ್ದಾರೆ. ಇದರಿಂದ ಆ ಗರ್ಭೀಣಿ ಮಹಿಳೆಗೆ  ರಕ್ತದೊತ್ತಡ ಜಾಸ್ತಿಯಾಗಿ, ಮುಂದಕ್ಕೆ ಇದೇ ಸಮಸ್ಯೆಯಿಂದಾಗಿ ಮಗು ಭ್ರೂಣದಲ್ಲೇ ಸತ್ತು ಹೋಗಿ ಅಬಾರ್ಷನ್ ಕೂಡಾ ಆಗಿತ್ತು. ಇದರೊಂದಿಗೆ ಇಲ್ಲಿ ಮಧ್ಯಾಹ್ನದ ಸಮಯದಲ್ಲಿ ಮಕ್ಕಳು ಮಲಗಿರಬೇಕಾದರೆ, ಅವರೊಂದಿಗೆ ಸಹಾಯಕಿಯವರು ಕೂಡಾ ಮಲಗಿ ನಿದ್ದೆ ಮಾಡುತ್ತಾರೆ. ಅಲ್ಲದೇ, ಬೆಳಗ್ಗೆ ಮಕ್ಕಳನ್ನು ಅಂಗನವಾಡಿಯೊಳಗೆ ನುಗ್ಗಿಸಿ ಅಂಗನವಾಡಿಯ ಪ್ರಧಾನ ಬಾಗಿಲು ಹಾಕಿದರೆ ಅದನ್ನು ಸಂಜೆಯೇ ತೆರೆಯುತ್ತಿದ್ದರು. ಇದಕ್ಕೆ ನಾವೆಲ್ಲಾ ವಿರೋಧ ವ್ಯಕ್ತಪಡಿಸಿದ ಬಳಿಕ ಈಗ ದಿನಕ್ಕೆ ಒಂದು ಗಂಟೆಯಷ್ಟು ಹೊತ್ತು ಮಾತ್ರ ಅಂಗನವಾಡಿಯ ಬಾಗಿಲು ತೆಗೆಯಲಾಗುತ್ತದೆ. ಉಳಿದ ಸಮಯದಲ್ಲಿ ಅಂಗನವಾಡಿಯಲ್ಲಿ ಮಕ್ಕಳನ್ನು ಕೂಡಿ ಹಾಕಲಾಗುತ್ತಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ವಿವಿಧ ಜಾತಿ, ಧರ್ಮಕ್ಕೆ ಸೇರಿದ ಪುಟಾಣಿಗಳು ಇಲ್ಲಿ ಕಲಿಯುತ್ತಿದ್ದು, ಆದರೆ ಪರಿಶಿಷ್ಟ ಜಾತಿಗೆ ಸೇರಿದ ಮಕ್ಕಳ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ಆದ್ದರಿಂದ ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ನಮಗೆ ನ್ಯಾಯ ಒದಗಿಸಿಕೊಡಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತಿದ್ದೇವೆ ಎಂದು ದೂರಿನಲ್ಲಿ ಆಗ್ರಹಿಸಿದ್ದಾರಲ್ಲದೆ, ಈ ಬಗ್ಗೆ ದ.ಕ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೂ ದೂರು ನೀಡುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News