ಕಸ ನಿರ್ವಹಣಾ ಶುಲ್ಕ ಮುಂಗಡವಾಗಿ ವಸೂಲಿ: ಸೆ. 17ರಿಂದ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ

Update: 2019-09-11 17:12 GMT

ಬಂಟ್ವಾಳ, ಸೆ. 11: ಪುರಸಭೆಯು ಆಸ್ತಿ ತೆರಿಗೆಯ ಜೊತೆ ಕಸ ನಿರ್ವಹಣಾ ಶುಲ್ಕವನ್ನು ಮುಂಗಡವಾಗಿ ವಸೂಲಿ ಮಾಡುವ ಕ್ರಮವನ್ನು ಕೈ ಬಿಡಬೇಕು ಎಂದು ಒತ್ತಾಯಿಸಿ ಬಂಟ್ವಾಳ ತಾಲೂಕು ಸಮಾನಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಬಂಟ್ವಾಳ ಪುರಸಭಾ ಕಚೇರಿ ಮುಂದೆ ಸೆ. 17ರಿಂದ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ನಡೆಸಲಿದೆ ಎಂದು ೀಡಿದ ಸಮಿತಿ ಸಂಚಾಲಕ ಬಿ.ಶೇಖರ್ ತಿಳಿಸಿದ್ದಾರೆ.

ಬುಧವಾರ ಬಂಟ್ವಾಳ ಪ್ರೆಸ್‍ಕ್ಲಬ್‍ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಸಮಿತಿ ಸಂಚಾಲಕ ಬಿ.ಶೇಖರ್ ಅಂದು ಬೆಳಿಗ್ಗೆ 9.30ಕ್ಕೆ ರಥಬೀದಿಯಲ್ಲಿರುವ ಸ್ವರ್ಣ ಸೌಧದ ಮುಂಭಾಗದಲ್ಲಿ ಪುರವಾಸಿಗಳು, ವರ್ತಕರು ಸಭೆಸೇರಿ ಅಲ್ಲಿಂದ ಮೆರವಣಿಗೆ ಮೂಲಕ ಪುರಸಭಾ ಕಚೇರಿಯವರೆಗೆ ಸಾಗಿ ಧರಣಿ ಆರಂಭಿಸಲಾಗುವುದು ಎಂದು ಹೇಳಿದರು.

ತೆರಿಗೆಯ ಜೊತೆ ಕಸ ಸಂಗ್ರಹದ ಶುಲ್ಕ ವಸೂಲಿ ಮಾಡುವ ಪುರಸಭೆಯ ಆಡಳಿತಾಧಿಕಾರಿ ಹಾಗೂ ಮುಖ್ಯಾಧಿಕಾರಿಯವರ ಜನವಿರೋಧಿ ನೀತಿಯನ್ನು ವಿರೋಧಿಸಿ, ಈಗಾಗಲೇ ಜಿಲ್ಲಾಧಿಕಾರಿವರಿಗೆ ಮನವಿ ಸಲ್ಲಿಸಿದ್ದಲ್ಲದೆ ಪ್ರತಿಭಟನೆಯನ್ನು ಕೂಡ ಮಾಡಲಾಗಿತ್ತು. ಆದರೆ ಇದಕ್ಕೆ ಸ್ಪಂದಿಸದ ಹಿನ್ನಲೆಯಲ್ಲಿ ಈ ಕ್ರಮವನ್ನು ಕೈ ಬಿಡುವವರೆಗೂ ಅನಿಧಿಷ್ಠಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಏಕಪಕ್ಷೀಯ ನಿರ್ಧಾರ:

ಪುರಸಭೆಯ ಈ ಹಿಂದಿನ ಆಡಳಿತಾವಧಿಯಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ಬಿಟ್ಟರೆ ತೆರಿಗೆ ಜೊತೆ ಶುಲ್ಕ ವಸೂಲಿಯ ಬಗ್ಗೆ ಯಾವುದೇ ನಿರ್ಣಯ ದಾಖಲಾಗಿಲ್ಲ. ಇದು ಪುರಸಭಾಧಿಕಾರಿಗಳ ಏಕಪಕ್ಷೀಯ ನಿರ್ಧಾರವಾಗಿದೆ. ತೆರಿಗೆಯ ಹೆಸರಿನಲ್ಲಿ ಭಯವನ್ನು ಉಂಟು ಮಾಡುತ್ತಿದೆ ಎಂದು ಪುರಸಭಾ ಸದಸ್ಯ ಮುನೀಶ್ ಅಲಿ ತಿಳಿಸಿದರು.

ಚುನಾಯಿತ ಪ್ರತಿನಿಧಿಗಳ ಜೊತೆ ಕನಿಷ್ಠ ಚರ್ಚಿಸದೆ ಈ ಕ್ರಮ ಕೈಗೊಂಡಿರುವುದನ್ನು ಖಂಡಿಸಿದ ಅವರು, ಪುರಸಭಾ ವ್ಯಾಪ್ತಿಯ ಕೆಲ ವಾಡ್9ಗಳಿಗೆ ಈಗಲೂ ಕಸ ಸಂಗ್ರಹದ ವಾಹನಗಳು ಹೋಗುವಂತ ಸ್ಥಿತಿಯಲ್ಲಿಲ್ಲ. ಸಮರ್ಪಕ ತ್ಯಾಜ್ಯ ವಿಲೇವಾರಿಯು ಆಗದಿರುವ ಈ ಹಂತದಲ್ಲಿ ಪುರವಾಸಿಗಳಿಂದ ಕಸದ ಶುಲ್ಕವನ್ನು ತೆರಿಗೆಯ ಜೊತೆ ಸಂಗ್ರಹಿಸುವುದು ಸಮರ್ಥನಿಯವಲ್ಲ.ಪುರವಾಸಿಯೊಬ್ಬ ದೃಢಪತ್ರಬೇಕೆಂದು ಕಚೇರಿಗೆ ತೆರಳಿದರೆ ಅಧಿಕಾರಿಗಳು ಕಸದ ಶುಲ್ಕ ಪಾವತಿಸದೆ ದೃಢಪತ್ರ ನೀಡದ ಉದಾಹರಣೆಯು ಇದೆ ಎಂದ ಮುನೀಶ್ ಅಲಿ, ಇದೀಗ ನೀರಿನ ಶುಲ್ಕವನ್ನು ಮನಬಂದಂತೆ ಏರಿಸಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಆರೋಪಿಸಿದರು. 

ಪುರಸಭೆಯ ಮುಖ್ಯಾಧಿಕಾರಿಯವರು ಶ್ರೀಮಂತರ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದ ರಾಮಣ್ಣ ವಿಟ್ಲ, ಇನ್ನಾದರೂ ಬಡವರ ಬಗ್ಗೆ ಕಾಳಜಿ ತೋರಲಿ ಎಂದು ಸಲಹೆ ನೀಡಿದರು.

ಪುರಸಭಾ ಸದಸ್ಯರಾದ ಗಂಗಾಧರ ಪೂಜಾರಿ, ಮಾಜಿ ಸದಸ್ಯರಾದ ಬಿ.ಮೋಹನ್, ಜಗದೀಶ್ ಕುಂದರ್ , ಸಮಿತಿ ಸಂಚಾಲಕ ಪ್ರಭಾಕರ ದೈವಗುಡ್ಡೆ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News