ಬಂಟ್ವಾಳ: ಮನೆಗೆ ನುಗ್ಗಿ ನಗ-ನಗದು ಕಳವು

Update: 2019-09-11 17:22 GMT

ಬಂಟ್ವಾಳ, ಸೆ. 11: ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಪಿಲಾತಬೆಟ್ಟು ಗ್ರಾಮದ ಬೆಂಚಿನಡುಕ ಎಂಬಲ್ಲಿ ಮನೆಯೊಂದಕ್ಕೆ ಕಳ್ಳರು ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

ಪಿಲಾತಬೆಟ್ಟು ಗ್ರಾಮದ ಬೆಂಚಿನಡುಕ ನಿವಾಸಿ ಏಂಜಲಿನ್ ಮಸ್ಕರೇನಸ್ ಎಂಬವರಿಗೆ ಸೇರಿದ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ. ಏಂಜಲಿನ್ ಅವರು ಆ. 24ರ ಸಂಜೆ 5 ಗಂಟೆಗೆ ಮನೆಗೆ ಬೀಗ ಹಾಕಿ ಸಂಬಂಧಿಕರಲ್ಲಿ ತೆರಳಿದ್ದು, ಸೆ. 10ರಂದು ಸಂಜೆ 5ಗಂಟೆಗೆ ಮನೆಗೆ ಬಂದಾಗ ಈ ಕೃತ್ಯ ಬೆಳಕಿಗೆ ಬಂದಿರುವುದಾಗಿ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಮನೆಗೆ ಬೀಗ ಹಾಕಿದ ಬಳಿಕ ಕೀಯನ್ನು ಮನೆಯ ಸಿಟ್‍ಔಟ್‍ನಲ್ಲಿದ್ದ ಹೂಕುಂಡದಲ್ಲಿರಿಸಿ ತೆರಳಿದ್ದರು. ಕಳ್ಳರು ಹೂಕುಂಡದಲ್ಲಿಟ್ಟಿದ್ದ ಕೀಯಿಂದ ಮನೆಯ ಬಾಗಿಲನ್ನು ತೆರೆದು ಮನೆಯೊಳಗೆ ಪ್ರವೇಶಿಸಿ ಬೆಡ್ ರೂಮ್‍ನಲ್ಲಿದ್ದ ಗೋದ್ರೆಜ್ ಕಪಾಟಿನಿಂದ ಸುಮಾರು 30 ಗ್ರಾಂ ತೂಕದ ಚಿನ್ನದ ಕರಿಮಣಿ ಸರ, ಸುಮಾರು 11 ಗ್ರಾಂ ತೂಕದ ನೆಕ್ಲೇಸ್ ಮತ್ತು ಸುಮಾರು 2 ಗ್ರಾಂ ತೂಕದ ಚಿನ್ನದ ಉಂಗುರ ಹಾಗೂ ಏಂಜಲಿನ್ ಅವರ ಅತ್ತೆಯ ಬೆಡ್ರೂಮ್‍ನ ಕಪಾಟಿನಲ್ಲಿದ್ದ ಸುಮಾರು 8 ಗ್ರಾಂ ತೂಕದ ಒಂದು ಜೊತೆ ಬೆಂಡೋಲೆಯನ್ನು ಕಳವುಗೈದು ಪರಾರಿಯಾಗಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಕಳವಾದ ಚಿನ್ನಾಭರಣದ ಮೌಲ್ಯ 1.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಸುದ್ದಿ ತಿಳಿದ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಎಸ್ಸೈ ಸೌಮ್ಯ ಮತ್ತು ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News