ಉಪ್ಪಿನಂಗಡಿಯಲ್ಲಿ ನದಿಗೆ ಬಿದ್ದ ಮಹಿಳೆ ಬಂಟ್ವಾಳದ ಕಡೇಶಿವಾಲಯದಲ್ಲಿ ರಕ್ಷಣೆ

Update: 2019-09-12 06:11 GMT

ಬಂಟ್ವಾಳ, ಸೆ.12: ನೇತ್ರಾವತಿ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ವೃದ್ಧೆಯೊಬ್ಬರನ್ನು ದೋಣಿಯ ನಾವಿಕರೊಬ್ಬರು ರಕ್ಷಣೆ ಮಾಡಿದ ಘಟನೆ ಬಂಟ್ವಾಳ ತಾಲೂಕಿನ ಕಡೇಶಿವಾಲಯ ಎಂಬಲ್ಲಿ ಗುರುವಾರ ನಡೆದಿದೆ.

ಕಡಬ ತಾಲೂಕಿನ ರಾಮಕುಂಜ ನಿವಾಸಿ, ಸುಮಾರು 70 ವರ್ಷ ಪ್ರಾಯದ ಮಂಜಕ್ಕ ಎಂಬವರು ರಕ್ಷಿಸಲ್ಪಟ್ಟವರು. ಇವರನ್ನು ಕಡೇಶಿವಾಲಯ ನಿವಾಸಿ, ಜನರನ್ನು ಸಾಗಿಸುವ ದೋಣಿಯ ನಾವಿಕ ಅಬ್ಬಾಸ್ ಎಂಬವರು ರಕ್ಷಣೆ ಮಾಡಿದ್ದಾರೆ.

''ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ನೇತ್ರಾವತಿ ನದಿಯಲ್ಲಿ ತೀರದಲ್ಲಿ ಸಾರ್ವಜನಿಕರಾಗಿ ಕಾಯುತ್ತಿದ್ದಾಗ ದೂರದಲ್ಲಿ ಯಾವುದೋ ಒಂದು ವಸ್ತು ತೇಲಿ ಬರುತ್ತಿದ್ದ ಹಾಗೆ ಕಂಡಿತು. ತಕ್ಷಣ ದೋಣಿ ಮೂಲಕ ತೆರಳಿ ಗಮನಿಸಿದಾಗ ಮಹಿಳೆಯೊಬ್ಬರು ನೀರಿನಲ್ಲಿ ಮುಳುಗೇಳುತ್ತಿದ್ದರು. ನೀರಿನ ಸೆಳೆತಕ್ಕೆ ಕೊಚ್ಚಿ ಹೋಗುತ್ತಿದ್ದ ಅವರನ್ನು ಕೂಡಲೇ ಕೇಶವ ಎಂಬವರ ಸಹಾಯದಿಂದ ಮೇಲೆತ್ತಿ ರಕ್ಷಣೆ ಮಾಡಿದೆವು'' ಎಂದು ಅಬ್ಬಾಸ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ಬಳಿಕ ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಆಗಮಿಸಿ ಮಂಜಕ್ಕು ಅವರನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಅಬ್ಬಾಸ್  ಮಾಹಿತಿ ನೀಡಿದ್ದಾರೆ.

ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ.

ಆತ್ಮಹತ್ಯೆಗೆ ಯತ್ನ?

ಮಹಿಳೆಯೊಬ್ಬರು ಗುರುವಾರ ಬೆಳಗ್ಗೆ ಉಪ್ಪಿನಂಗಡಿಯ ಸಹಸ್ರ ಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಬಳಿಯಿರುವ ನೇತ್ರಾವತಿ ಸಮುದಾಯ ಭವನದ ಸಮೀಪ ನದಿಯಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಕೆಲವರು ಗಮನಿಸಿದ್ದರೂ, ರಕ್ಷಣೆ ಸಾಧ್ಯವಾಗಿರಲಿಲ್ಲ. ಮಹಿಳೆಯನ್ನು ಕಡೇಶಿವಾಲಯದಲ್ಲಿ ರಕ್ಷಣೆ ಮಾಡಿದಾಗ ಅವರು ರಾಮಕುಂಜ ನಿವಾಸಿ ಮಂಜಕ್ಕ ಎಂದು ತಿಳಿದುಬಂದಿದೆ. ಈ ನಡುವೆ ಮಂಜಕ್ಕ ಆತ್ಮಹತ್ಯೆ ಮಾಡಿಕೊಳ್ಳಲೆಂದೇ ನದಿಗೆ ಹಾರಿರುವುದಾಗಿ ಹೇಳಲಾಗುತ್ತಿದ್ದು, ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News