ಬಿಹಾರ ಆಶ್ರಯಧಾಮದಲ್ಲಿ ಅತ್ಯಾಚಾರ ಪ್ರಕರಣ: 8 ಸಂತ್ರಸ್ತರನ್ನು ಕುಟುಂಬದೊಂದಿಗೆ ಒಂದಾಗಿಸಲು ಸುಪ್ರೀಂ ಆದೇಶ

Update: 2019-09-12 08:35 GMT

ಹೊಸದಿಲ್ಲಿ, ಸೆ.12: ಬಿಹಾರದ ಮುಝಫ್ಫರ್‌ಪುರದ ಆಶ್ರಯಧಾಮದಲ್ಲಿ ಲೈಂಗಿಕ ಶೋಷಣೆಗೆ ಒಳಗಾಗಿದ್ದ 8 ಸಂತ್ರಸ್ತ ಬಾಲಕಿಯರನ್ನು ಅವರ ಕುಟುಂಬ ಸದಸ್ಯರೊಂದಿಗೆ ಒಂದಾಗಿಸುವಂತೆ ಸುಪ್ರೀಂಕೋರ್ಟ್ ಗುರುವಾರ ಬಿಹಾರ ಸರಕಾರಕ್ಕೆ ಆದೇಶಿಸಿದೆ. ಈ 8 ಮಂದಿ ಬಾಲಕಿಯರಿಗೆ ಆರ್ಥಿಕ, ವೈದ್ಯಕೀಯ ಹಾಗೂ ಶೈಕ್ಷಣಿಕ ನೆರವನ್ನು ನೀಡಬೇಕೆಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

ಮುಝಫ್ಫರ್‌ಪುರದಲ್ಲಿರುವ ಆಶ್ರಯಧಾಮದಲ್ಲಿ 30ಕ್ಕೂ ಅಧಿಕ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೆ, ಲೈಂಗಿಕ ದೌರ್ಜನ್ಯ ಎಸೆಗಲಾಗಿತ್ತು. ಟಾಟಾ ಸಾಮಾಜಿಕ ವಿಜ್ಞಾನ ಸಂಸ್ಥೆ ಕಳೆದ ವರ್ಷ ವರದಿ ಸಲ್ಲಿಸಿದ ಬಳಿಕ ಈ ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿತ್ತು.

ಪ್ರಕರಣದ ಓರ್ವ ಆರೋಪಿಯಾಗಿರುವ ಮಂಜು ವರ್ಮಾ ನಿತೀಶ್ ಕುಮಾರ್ ಸರಕಾರದ ಸಮಾಜ ಕಲ್ಯಾಣ ಸಚಿವೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮಂಜೂ ಅವರ ಪತಿ ಮುಝಫ್ಫರ್‌ಪುರ ಆಶ್ರಯಧಾಮ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಬ್ರಿಜೇಶ್ ಠಾಕೂರ್‌ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಎಂಬ ಆರೋಪ ಕೇಳಿಬಂದಿತ್ತು.

ಸಾಮಾಜಿಕ ಕಾರ್ಯಕರ್ತನಾಗಿದ್ದ ಬ್ರಿಜೇಶ್ ಠಾಕೂರ್, ಎನ್‌ಜಿಒ ಮುಖ್ಯಸ್ಥನಾಗಿದ್ದ. ಈತ ಆಶ್ರಯಧಾಮವನ್ನು ನಡೆಸುತ್ತಿದ್ದ. ಈ ಅತ್ಯಾಚಾರ ಪ್ರಕರಣವನ್ನು ಕಳೆದ ಜುಲೈನಲ್ಲಿ ಸಿಬಿಐಗೆ ಹಸ್ತಾಂತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News