×
Ad

ಉಡುಪಿ: ರಾಜ್ಯದ ಬಗ್ಗೆ ಕೇಂದ್ರದ ನಿರ್ಲಕ್ಷ; ಕಾಂಗ್ರೆಸ್‌ನಿಂದ ಪ್ರತಿಭಟನೆ

Update: 2019-09-12 19:10 IST

ಉಡುಪಿ, ಸೆ.12: ರಾಜ್ಯ ಭೀಕರ ನೆರೆ, ಅತಿವೃಷ್ಟಿಗೆ ಗುರಿಯಾದರೂ ಕೇಂದ್ರ ಸರಕಾರ ತೋರಿಸುತ್ತಿರುವ ನಿರ್ಲಕ್ಷದ ಧೋರಣೆಯನ್ನು ಖಂಡಿಸಿ, ಕೇಂದ್ರದ ಜನವಿರೋಧಿ ನೀತಿಯಾದ ಮೋಟಾರು ವಾಹನ ಕಾಯಿದೆಯ ತಿದ್ದುಪಡಿ ಯನ್ನು ವಿರೋಧಿಸಿ ಗುರುವಾರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನಾಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಅಜ್ಜರಕಾಡಿನ ಹುತಾತ್ಮರ ಚೌಕದ ಎದುರು ನಡೆದ ಪ್ರತಿಭಟನಾ ಸಭೆಯನ್ನು ದ್ದೇಶಿಸಿ ಮಾತನಾಡಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ, ರಾಜ್ಯದಲ್ಲಿ ಬಂದ ಭೀಕರ ಪ್ರವಾಹದಿಂದಾಗಿ 22 ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಜೀವ ಹಾಗೂ ಸೊತ್ತುಗಳ ಹಾನಿಯಾಗಿದ್ದರೂ, ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ತೀರಾ ನಿರ್ಲಕ್ಷದ ಧೋರಣೆಯನ್ನು ಹೊಂದಿದ್ದಾರೆ. ಹಿಂದೆ ಯುಪಿಸಿ ಸರಕಾರದ ಸಮಯದಲ್ಲಿ ಬಂದ ಪ್ರವಾಹದ ಸಮೀಕ್ಷೆಗೆ ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ತಕ್ಷಣ ಧಾವಿಸಿ ಬಂದು ವೀಕ್ಷಿಸಿದ್ದಲ್ಲದೇ, ರಾಜ್ಯದಿಂದ ತೆರಳುವ ಮುನ್ನವೇ ತಾತ್ಕಾಲಿಕ ಪರಿಹಾರ ನಿಧಿಯನ್ನು ಘೋಷಿಸಿದ್ದರು ಎಂದು ನೆನಪಿಸಿಕೊಂಡರು.

ಆದರೆ ಈ ಬಾರಿ ಕಳೆದ ಸಲಕ್ಕಿಂತ ಭೀಕರವಾದ ಪ್ರವಾಹ ಬಂದು ಹಾನಿಯಾಗಿದ್ದರೂ, ಕೇಂದ್ರ ಇದುವರೆಗೆ ಚಿಕ್ಕಾಸು ಸಹ ಬಿಡುಗಡೆಮಾಡಿಲ್ಲ. ಮೋದಿ ರಷ್ಯಕ್ಕೆ ತೆರಳಿ ಅಲ್ಲಿಗೆ ಹಣ ಬಿಡುಗಡೆ ಮಾಡುತ್ತಾರೆ. ಭೂತಾನ್‌ನಲ್ಲಿ ಮಕ್ಕಳ ಬೆನ್ನು ತಟ್ಟುತ್ತಾರೆ. ಆದರೆ ಅದರ ಅಗತ್ಯವಿರುವ ಕರ್ನಾಟಕದತ್ತ ತಲೆ ಎತ್ತಿಯೂ ನೋಡುವುದಿಲ್ಲ ಎಂದು ದೂರಿದರು.

ಯಡಿಯೂರಪ್ಪ ನೆರೆ ಸಂತ್ರಸ್ತರಿಗೆ ತುರ್ತು ಪರಿಹಾರವಾಗಿ 10000ರೂ. ಘೋಷಿಸಿದ್ದರೂ, ಅದು ಜನರಿಗೆ ಇನ್ನೂ ಸಿಕ್ಕಿಲ್ಲ. ಇನ್ನು ಮೋಟಾರು ವಾಹನ ಕಾಯಿದೆ ತಿದ್ದುಪಡಿ ಮೂಲಕ ಚಾಲಕರ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ. ಡಿಕೆಶಿ ಬಂಧನ ರಾಜಕೀಯ ಉದ್ದೇಶದಿಂದ ಕೂಡಿದೆ ಎಂಬುದು ಎಲ್ಲರಿಗೂ ಮನವರಿಕೆಯಾಗಿದೆ ಎಂದು ಸೊರಕೆ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ: ಜಿಲ್ಲೆಯಲ್ಲಿ ಮರಳುಗಾರಿಕೆಗೆ ಅವಕಾಶ ನೀಡುತ್ತೇವೆ ಎಂದು ಆಶ್ವಾಸನೆ ನೀಡಿ ಗೆಲುವು ಸಾಧಿಸಿದ ಬಿಜೆಪಿ ಶಾಸಕರು ಇದೀಗ ಮೌನವಾಗಿದ್ದಾರೆ. ಹೀಗಾಗಿ ಒಂದು ತಿಂಗಳೊಳಗೆ ಮರಳು ಸಮಸ್ಯೆ ಬಗೆಹರಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಿದ್ದೇವೆ ಎಂದು ವಿನು ಕುಮಾರ್ ಸೊರಕೆ ಎಚ್ಚರಿಸಿದರು.

ಮಾಜಿ ಶಾಸಕ ಯು.ಆರ್.ಸಭಾಪತಿ ಮಾತನಾಡಿ, ಕಾಂಗ್ರೆಸ್‌ನ 15 ಶಾಸಕರನ್ನು ಹಣದ ಆಮಿಷ ತೋರಿಸಿ ಖರೀದಿಸಿದ ಬಿಜೆಪಿ ಇದೀಗ ಅವರನ್ನು ಬೀದಿಪಾಲು ಮಾಡಿದೆ. ಈ ಕ್ಷೇತ್ರಗಳಿಗೆ ನಡೆಯಲಿರುವ ಮುಂದಿನ ಉಪಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಗೆದ್ದು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ, ವೆರೋನಿಕಾ ಕರ್ನೇಲಿಯೋ, ನವೀನ್‌ಚಂದ್ರ ಸುವರ್ಣ, ಭಾಸ್ಕರ ರಾವ್ ಕಿದಿಯೂರು, ಜನಾರ್ದನ ಭಂಡಾರ್ಕರ್, ಉದ್ಯಾವರ ನಾಗೇಶ ಕುಮಾರ್, ಪ್ರಖ್ಯಾತ ಶೆಟ್ಟಿ, ಡಾ.ಸುನಿತಾ ಶೆಟ್ಟಿ, ಚಂದ್ರಿಕಾ ಕೇಳ್ಕರ್, ಸುಧಾಕರ ಶೆಟ್ಟಿ ಮೈರ್ಮಾಡಿ, ಹಬೀಬ್ ಅಲಿ, ಕೀರ್ತಿ ಶೆಟ್ಟಿ, ಶಶಿಧರ ಶೆಟ್ಟಿ ಎಲ್ಲೂರು, ಅಬ್ದುಲ್ ಅಝೀರ್ ಹೆಜಮಾಡಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News