ಮಂಗಳೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ನಾಟಿವೈದ್ಯನಿಗೆ ಮೂರು ವರ್ಷ ಜೈಲುಶಿಕ್ಷೆ

Update: 2019-09-12 14:13 GMT

ಮಂಗಳೂರು, ಸೆ.12: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣವೊಂದು ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಲ್ಲಿ ಸಾಬೀತಾಗಿದ್ದು, ಆರೋಪಿ ಬೆಳ್ತಂಗಡಿ ತಾಲೂಕು ನಿಡ್ಲೆ ಗ್ರಾಮದ ಶೇಖರ ನಲಿಕೆ (45) ಎಂಬಾತನಿಗೆ ಮೂರು ವರ್ಷಗಳ ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಲಾಗಿದೆ.

ಪ್ರಕರಣ ವಿವರ: ಆರೋಪಿ ಶೇಖರ ನಲಿಕೆ ನಾಟಿ ವೈದ್ಯನಾಗಿದ್ದು, 2016ರ ಮೇ 28ರಂದು ಆತನ ಮನೆಗೆ ಅದೇ ಊರಿನ ವ್ಯಕ್ತಿಯೊಬ್ಬರನ್ನು ಅವರ ಮದ್ಯಪಾನ ಚಟ ಬಿಡಿಸುವುದಕ್ಕಾಗಿ ಪತ್ನಿ ಮತ್ತು 13 ವರ್ಷದ ಪುತ್ರಿ ಕರೆದುಕೊಂಡು ಬಂದಿದ್ದರು.

ಕುಡಿತದ ಚಟ ಬಿಡಿಸುವ ಬಗ್ಗೆ ಅವರಿಗೆ ಔಷಧಿ ನೀಡಿದ ಬಳಿಕ ಅವರ ಪುತ್ರಿಯನ್ನು ನೋಡಿದ ಶೇಖರ ನಲಿಕೆ 'ಆಕೆಗೆ ಸೋಂಕು ಇದೆ. ತಾಯಿತ ಕಟ್ಟಬೇಕು. ನೀವು ಹೊರಗೆ ಹೋಗಿ' ಎಂದು ಆಕೆಯ ತಂದೆ ಮತ್ತು ತಾಯಿಯನ್ನು ಹೊರಗೆ ಕಳುಹಿಸಿ ಕೊಟ್ಟಿದ್ದನು. ತಂದೆ ಮತ್ತು ತಾಯಿ ಹೊರಗೆ ಕಾಯುತ್ತಿದ್ದು, ಸ್ವಲ್ಪ ಹೊತ್ತಿನಲ್ಲಿ ಅವರ ಪುತ್ರಿ ಅಳುತ್ತಾ ಹೊರಗೆ ಬಂದಿದ್ದಳು. ಹೆತ್ತವರು ವಿಚಾರಿಸಿದಾಗ ಆಕೆ ತನಗೆ ಶೇಖರ ನಲಿಕೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ತಿಳಿಸಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯ ತಂದೆ ಮತ್ತು ತಾಯಿ ಧರ್ಮಸ್ಥಳ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದರು.

ಪೊಲೀಸರು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅದೇ ದಿನ ಆರೋಪಿಯನ್ನು ಬಂಧಿಸಿದ್ದರು. ಬಳಿಕ ಬೆಳ್ತಂಗಡಿ ಪೊಲೀಸ್ ಇನ್‌ಸ್ಪೆಕ್ಟರ್ ನೇಮಿರಾಜು ತನಿಖೆ ನಡೆಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಮಂಗಳೂರಿನ 2ನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಬಿ.ಆರ್. ಪಲ್ಲವಿ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡು ಬಾಲಕಿಗೆ ಲೈಂಗಿಕ ಕಿರುಕುಳ (ಪೊಕ್ಸೊ ಕಾಯ್ದೆಯ ಕಲಂ 8) ಮತ್ತು ಬೆದರಿಕೆ (ಐಪಿಸಿ 506) ಹಾಕಿದ ಆರೋಪ ಸಾಬೀತಾಗಿದೆ ಎಂಬ ತೀರ್ಮಾನಕ್ಕೆ ಬಂದು ಆರೋಪಿಗೆ ಮೂರು ವರ್ಷಗಳ ಶಿಕ್ಷೆ ವಿಧಿಸಿ ಸೆ.11ರಂದು ತೀರ್ಪು ನೀಡಿದರು.

10,000 ರೂ. ದಂಡ ಮೊತ್ತದಲ್ಲಿ 9000 ರೂ.ನ್ನು ಸಂತ್ರಸ್ತ ಬಾಲಕಿಗೆ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ. ಸರಕಾರದಿಂದಲೂ ಆಕೆಗೆ ಪರಿಹಾರ ದೊರಕಿಸಿ ಕೊಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಶಿಾರಸು ಮಾಡಿದೆ. ಒಟ್ಟು 12 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.

ಈ ಪ್ರಕರಣದಲ್ಲಿ ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೆಂಕಟರಮಣ ಸ್ವಾಮಿ ಸಿ. ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News