×
Ad

ಪ.ಜಾತಿ,ಪಂಗಡದ ಉದ್ಯೋಗಾಕಾಂಕ್ಷಿಗಳಲ್ಲಿ ಭರವಸೆ ಮೂಡಿಸಿದ ಮೇಳ

Update: 2019-09-12 20:48 IST

ಉಡುಪಿ, ಸೆ.12: ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಡುಪಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಆರೋಗ್ಯ ಇಲಾಖೆಯ ಎಸ್‌ಸಿಪಿ-ಟಿಎಸ್‌ಪಿ ಅನುದಾನದಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಆರೋಗ್ಯ-ಆಸ್ಪತ್ರೆ ಕ್ಷೇತ್ರಗಳ ಉದ್ಯೋಗಗಳಿಗೆ ಸಂಬಂಧಿಸಿದ ಕೌಶಲ್ಯ ಅಭಿವೃದ್ಧಿ ತರಬೇತಿಗೆ ಅಭ್ಯರ್ಥಿಗಳ ಆಯ್ಕೆ ಹಾಗೂ ಉದ್ಯೋಗ ಮೇಳ ಇಂದು ಅಜ್ಜರಕಾಡಿನ ಮಹಿಳಾ ಸಮಾಜದಲ್ಲಿ ನಡೆಯಿತು.

ಮಹಿಳಾ ಸಮಾಜದಲ್ಲಿ ಸೇರಿದ್ದ ಪ.ಜಾತಿ ಮತ್ತು ಪಂಗಡದ ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿಯ ಕಣ್ಣುಗಳಲ್ಲಿ ಉದ್ಯೋಗ ದೊರೆಯುವ ಭರವಸೆ ಮೂಡಿತ್ತು.ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮ ಶಿಕ್ಷಣ ಪಡೆದರೂ, ಕೌಶಲ್ಯ ಇಲ್ಲದ ಕಾರಣ ಉದ್ಯೋಗ ದೊರೆಯುವುದು ಸುಲಭ ಸಾಧ್ಯವಿಲ್ಲ. ಇದರಿಂದ ಎಲ್ಲೆಡೆ ನಿರುದ್ಯೋಗಿಗಳ ಸಂಖ್ಯೆ ಅಧಿಕವಾಗಿದೆ. ಈ ನಿಟ್ಟಿನಲ್ಲಿ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಉದ್ಯೋಗ ದೊರಕಿಸಿ ಕೊಡುವ ಮಹತ್ವಾಕಾಂಕ್ಷೆ ಈ ಉದ್ಯೋಗ ಮೇಳ ಜನೆಯನ್ನು ಸರಕಾರ ರೂಪಿಸಿತ್ತು.

ಉಡುಪಿ ಜಿಲ್ಲೆಯಲ್ಲಿ ಈ ಯೋಜನೆಯ ಮೂಲಕ 123 ಮಂದಿಗೆ ರಾಜ್ಯದ ಪ್ರತಿಷ್ಠಿತ ಆಸ್ಪತೆಗಳಲ್ಲಿ ತರಬೇತಿಗೆ ಅವಕಾಶ ಸಿಕ್ಕಿದ್ದು, ಆಯ್ಕೆಗೊಂಡ ಅಭ್ಯರ್ಥಿ ಗಳಿಗೆ, ಕೌಶಲ್ಯಾಭಿವೃದ್ದಿ ತರಬೇತಿ ನೀಡಿ, ಉದ್ಯೋಗದ ಭರವಸೆ ನೀಡಲಾ ಗುವುದು. ಹೆಚ್ಚಿನ ಅರ್ಜಿಗಳು ಬಂದರೆ ಇತರ ಜಿಲ್ಲೆಗಳಲ್ಲಿರುವ ಖಾಲಿ ಜಾಗಗಳಿಗೆ ಅಭ್ಯರ್ಥಿಗಳನ್ನು ತರಬೇತಿಗೆ ಕಳುಸಿಕೊಡಲಾಗುವುದು. ಆಯ್ಕೆಯಲ್ಲಿ ಶೇ.50 ಸೀಟು ಮಹಿಳೆಯರಿಗೆ ಮೀಸಲಾಗಿದ್ದು, ಒಂದು ವೇಳೆ ಮಹಿಳೆಯರ ಮೀಸಲಾತಿ ಭರ್ತಿಯಾಗದಿದ್ದ ಸಂದರ್ಭದಲ್ಲಿ, ಈ ಹುದ್ದೆಗಳಿಗೆ ಪುರುಷ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುತ್ತದೆ.

ಅಭ್ಯರ್ಥಿಗಳಿಂದ ಸ್ವೀಕರಿಸಿದ ಅರ್ಜಿಗಳನ್ನು ಆಯ್ಕೆ ಸಮಿತಿ ಪರಿಶೀಲನೆ ನಡೆಸಿ ಸಂಬಂಧಪಟ್ಟ ಕೋರ್ಸ್‌ನ ತರಬೇತಿಗೆ ಆಯ್ಕೆ ಮಾಡಲಾಗುತ್ತದೆ. ವಿವಿಧ ಆಸ್ಪತ್ರೆಗಳಲ್ಲಿ ಆಯಾ ಕೋರ್ಸ್‌ಗೆ ಅನುಗುಣವಾಗಿ ತರಬೇತಿ ನಡೆಯಲಿದ್ದು, ತರಬೇತಿ ಅವಧಿಯಲ್ಲಿ ವಿದ್ಯಾರ್ಥಿಗಳ ವಸತಿ, ಆಹಾರ, ಶೈಕ್ಷಣಿಕ ವೆಚ್ಚ ಉಚಿತವಾಗಿರುತ್ತದೆ.

ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನಿರುದ್ಯೋಗಿ ಅಭ್ಯರ್ಥಿಗಳಿಗೆ ಆರೋಗ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ದಿ ತರಬೇತಿ ನೀಡಿ, ಉದ್ಯೋಗ ಭರವಸೆ ನೀಡುವ ನಿಟ್ಟಿನಲ್ಲಿ ಯೋಜನೆಯನ್ನು ಕೈಗೊಂಡಿದ್ದು, ಈ ಯೋಜನೆಗಾಗಿ 20 ಕೋಟಿ ರೂ ಅನುದಾನ ಮೀಸಲಿರಿಸಲಾಗಿದೆ.

ಬೆಂಗಳೂರಿನ ಅಪೊಲೋ, ರಾಮಯ್ಯ ಆಸ್ಪತ್ರೆ, ನಾರಾಯಣ ಹೆಲ್ತ್ ಆಸ್ಪತ್ರೆಯ ವಿವಿಧ ವಿಭಾಗದ ಹುದ್ದೆಗಳಿಗೆ ಕೌಶಲ್ಯಾಭಿವೃಧ್ದಿ ತರಬೇತಿಗಾಗಿ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಫಾರ್ಮಸಿ ಅಸಿಸ್ಟೆಂಟ್, ಆಸ್ಪತ್ರೆ ಐಸಿಯು ಘಟಕ, ಡ್ಯೂಟಿ ಮೆನೇಜರ್, ಆಸ್ಪತ್ರೆಯ ವಿವಿಧ ಘಟಕಗಳಲ್ಲಿ ಸಹಾಯಕ ಮತ್ತಿತರ ಹುದ್ದೆಗಳಿಗೆ, ಪಿಯುಸಿ ವಿಜ್ಞಾನ, ಯಾವುದೆ ಪದವಿ ಅಥವಾ ಜಿಎನ್‌ಎಂ/ಬಿಎಸ್‌ಸಿ ನರ್ಸಿಂಗ್ ಪಾಸಾದವರು ಮೂರು ತಿಂಗಳಿನಿಂದ 9 ತಿಂಗಳವರೆಗೆ ತರಬೇತಿಯನ್ನು ಪಡೆಯುತ್ತಾರೆ. ಆರೋಗ್ಯ ಕ್ಷೇತ್ರದಲ್ಲಿ ಖ್ಯಾತ ಸಂಸ್ಥೆಗಳ ಅನುಭವಿ ವೈದ್ಯರು ತರಬೇತಿ ನೀಡಲಿದ್ದು, ತರಬೇತಿಯ ನಂತರ ಉದ್ಯೋಗಾವಕಾಶವನ್ನೂ ಒದಗಿಸಲಾಗುವುದು.

ಗುರುವಾರ ನಡೆದ ಉದ್ಯೋಗ ಮೇಳದಲ್ಲಿ ಸುಮಾರು 140ಕ್ಕೂ ಅಧಿಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಅಭ್ಯರ್ಥಿಗಳಿಗೆ ಬೆಂಗಳೂರಿನ ಅಪೊಲೋ, ರಾಮಯ್ಯ ಆಸ್ಪತ್ರೆ, ನಾರಾಯಣ ಹೆಲ್ತ್ ಆಸ್ಪತ್ರೆಯ ಪ್ರತಿನಿಧಿಗಳು ಕೌನ್ಸಿಲಿಂಗ್ ನಡೆಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಅಶೋಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಸಮಾಜ ಕಲ್ಯಾಣ ಇಲಾಖೆಯ ರಾಘವೇಂದ್ರ, ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಯ ವಿಶ್ವನಾಥ್, ಅಪೊಲೊ ಆಸ್ಪತ್ರೆಯ ರಮೇಶ್, ಎಂ.ಎಸ್. ರಾಮಯ್ಯ ಆಸ್ಪತ್ರೆಯ ಚಿನ್ಮಯಿ, ನಾರಾಯಣ ಹೆಲ್ತ್ ಆಸ್ಪತ್ರೆಯ ಉದಯ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಆರೋಗ್ಯ ಮೇಲ್ವಿಚಾರಕ ಆನಂದಗೌಡ ನಿರೂಪಿಸಿದರು. ಹಿರಿಯ ಆರೋಗ್ಯ ಸಹಾಯಕ ಸತೀಶ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News