ಪಜೀರು ಭೂಕುಸಿತ: ತುರ್ತು ಕ್ರಮದ ಬಗ್ಗೆ ಅಧಿಕಾರಿಗಳ ಸಭೆ

Update: 2019-09-12 15:40 GMT

ಕೊಣಾಜೆ:  ಪಜೀರು ಗ್ರಾಮದ ತದ್ಮ ಮುರಾಯಿ ಎಂಬಲ್ಲಿ ಸೋಮವಾರ ಭೂಕುಸಿತ ಉಂಟಾಗಿ ಕೃಷಿ ಜಮೀನು ಜಲಾವೃತಗೊಂಡು ಅಪಾರ ಕೃಷಿ ಹಾನಿ ಸಂಭವಿಸಿತ್ತು. ಇದೀಗ ಸಮಸ್ಯೆಯ ತುರ್ತು ಪರಿಹಾರ ಕ್ರಮದ ಬಗ್ಗೆ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆಯು ಪಜೀರು ಮುರಾಯಿಯಲ್ಲಿ ನಡೆಯಿತು.

ಭೂಕುಸಿತದಿಂದ ಮಣ್ಣು ನೀರು ಹರಿಯುವ ತೋಡಿಗೆ ಬಿದ್ದಿದ್ದು ಇದೀಗ ಹಿಟಾಚಿ ಯಂತ್ರದ ಮೂಲಕ ಕೂಡಲೇ ಮಣ್ಣು ತೆರವುಗೊಳಿಸುವ ಬಗ್ಗೆ ಹಾಗೂ ನೀರು ತುಂಬಿ ಹಾನಿಗೊಳಾಗಿರುವ ಕೃಷಿ ಜಮೀನುಗಳನ್ನು ಪರಿಶೀಲಿಸಿ ಪರಿಹಾರ ಕ್ರಮ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಬಂಟ್ವಾಳ ತಾಲೂಕು ತಹಶೀಲ್ದಾರ್ ರಶ್ಮಿ ಅವರು ತಿಳಿಸಿದರು.

ಹಾನಿಗೊಳಗಾದ ತೋಟ ಹಾಗೂ ಗದ್ದೆಯಲ್ಲಿ ಆಗಿರುವ ಹಾನಿಯ ಪ್ರಮಾಣಕ್ಕುನುಸಾರವಾಗಿ ಪರಿಹಾರ ನೀಡಲಾಗುವುದು. ತೊಂದರೆಗೊಳಗಾದವರು ಗ್ರಾಮಕರಣಿಕರಿಗೆ ಅರ್ಜಿ ಸಲ್ಲಿಸಬೇಕು. ಪರಿಶೀಲನೆ ನಡೆಸಿದ ಬಳಿಕ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ಗ್ರಾಮಸ್ಥರಿಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ, ಪಜೀರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೀತಾರಾಮ ಶೆಟ್ಟಿ, ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಸದಸ್ಯ ನವೀನ್ ಪಾದಲ್ಪಾಡಿ, ತೋಟಗಾರಿಕೆ ಇಲಾಖೆಯ ಅಧಿಕಾರಿ ರೆಹನಾ ಬೇಗಂ, ಆರ್‍ಎನ್‍ಐ ನವೀನ್, ಕೃಷಿ ಸಹಾಯಕ ನಿರ್ದೇಶಕ ನಾರಾಯಣ, ಇಂಜಿನಿಯರ್ ರವಿ, ಗ್ರಾಮ ಕರಣಿಕ ತೌಫಿಕ್, ಪಂಚಾಯಿತಿ ಸದಸ್ಯರಾದ ವೀಣಾ, ಇಂತಿಯಾಝ್, ರಾಕೇಶ್, ಶಾಫಿ, ಫ್ಲೋರಿನ್ ಡಿಸೋಜ, ಸಮೀರ್, ಪಂಚಾಯಿತಿ ಕಾರ್ಯದರ್ಶಿ ನಾಗೇಶ್ ಮೊದಲಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News