‘ಸುಪ್ರೀಂಕೋರ್ಟ್ ನಮ್ಮದು’ ಎಂಬ ಬಿಜೆಪಿ ಸಚಿವನ ಹೇಳಿಕೆ ಖಂಡಿಸಿದ ಮುಖ್ಯ ನ್ಯಾಯಮೂರ್ತಿ ಗೊಗೊಯಿ

Update: 2019-09-12 17:05 GMT

ಹೊಸದಿಲ್ಲಿ, ಸೆ. 12: ‘‘ಬಿಜೆಪಿ ಭರವಸೆ ನೀಡಿದಂತೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲಾಗುವುದು. ಸರ್ವೋಚ್ಚ ನ್ಯಾಯಾಲಯ ನಮ್ಮದು’’ ಎಂಬ ಉತ್ತರಪ್ರದೇಶದ ಸಚಿವ ಮುಕುಟ್ ಬಿಹಾರಿ ವರ್ಮಾ ಹೇಳಿಕೆಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಗುರುವಾರ ಖಂಡಿಸಿದ್ದಾರೆ.

‘‘ನಾವು ಇಂತಹ ಹೇಳಿಕೆಯನ್ನು ಖಂಡಿಸುತ್ತೇವೆ’’ ಎಂದು ಅಯೋಧ್ಯೆ ಭೂ ಒಡೆತನ ವಿವಾದ ಪ್ರಕರಣದ ವಿಚಾರಣೆ ನಡೆಸುತ್ತಿರುವ ಐವರು ಸದಸ್ಯರ ಸಾಂವಿಧಾನಿಕ ಪೀಠದ ನೇತೃತ್ವ ವಹಿಸಿರುವ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಹೇಳಿದ್ದಾರೆ.

ವಿಚಾರಣೆಯ 22ನೇ ದಿನವಾದ ಗುರುವಾರ ಮುಸ್ಲಿಂ ಕಕ್ಷಿಗಾರರನ್ನು ಪ್ರತಿನಿಧಿಸುತ್ತಿರುವ ನ್ಯಾಯವಾದಿ ರಾಜೀವ್ ಧವನ್, ಈ ಪ್ರಕರಣದ ಕುರಿತು ವಾದ ಮುಂದುವರಿಸಲು ಪರಿಸ್ಥಿತಿ ಅನುಕೂಲಕರವಾಗಿಲ್ಲ ಎಂದು ನ್ಯಾಯಾಲಯದ ಮುಂದೆ ಹೇಳಿದರು. ತನ್ನ ಕಾನೂನು ತಂಡದ ಗುಮಾಸ್ತನ ಮೇಲೆ ಇತರ ಗುಮಾಸ್ತರು ಹೊಸತಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ಹೇಳಿರುವ ಅವರು, ಉತ್ತರಪ್ರದೇಶದ ಸಹಕಾರಿ ಸಚಿವ ಮುಕುಟ್ ಬಿಹಾರಿ ವರ್ಮಾ ಅವರ ಹೇಳಿಕೆ ಉಲ್ಲೇಖಿಸಿದರು.

ಮುಕುಟ್ ಬಿಹಾರಿ ವರ್ಮಾ, ‘‘ಬಿಜೆಪಿ ಅಭಿವೃದ್ಧಿ ವಿಷಯದಲ್ಲಿ ಅಧಿಕಾರಕ್ಕೆ ಬಂದಿದೆ. ಆದರೆ, ನಮ್ಮ ನಿರ್ಧಾರದಂತೆ ರಾಮ ಮಂದಿರ ನಿರ್ಮಾಣ ಮಾಡಲಾಗುವುದು. ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇದೆ. ಸುಪ್ರೀಂ ಕೋರ್ಟ್ ನಮ್ಮದು. ನ್ಯಾಯಾಂಗ, ಆಡಳಿತ, ದೇಶ ಹಾಗೂ ರಾಮ ಮಂದಿರ ನಮಗೆ ಸೇರಿದ್ದು’’ ಎಂದು ಹೇಳಿದ್ದರು. ವ್ಯಾಪಕವಾಗಿ ಪ್ರಸಾರವಾದ ಈ ಹೇಳಿಕೆಯ ವೀಡಿಯೊ ದೃಶ್ಯದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಮುಕುಟ್ ಬಿಹಾರಿ ವರ್ಮಾ, ಸುಪ್ರೀಂ ಕೋರ್ಟ್ ದೇಶದ ಜನರಿಗೆ ಸೇರಿರುವುದು ಎಂಬ ಅರ್ಥದಲ್ಲಿ ನಾನು ಹೇಳಿಕೆ ನೀಡಿದ್ದೆ. ‘ನಮ್ಮದು’ ಎಂದರೆ, ದೇಶದ 125 ಕೋಟಿ ಜನರು ಎಂದರ್ಥ. ಇದು ನನ್ನನ್ನು ಅಥವಾ ಬಿಜೆಪಿಯನ್ನು ಸಂಬಂಧಿಸಿ ಹೇಳಿದ್ದಲ್ಲ ಎಂದು ಸಮಜಾಯಿಷಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News