ಅಯೋಧ್ಯೆ ಪ್ರಕರಣ; ಧವನ್ ಸಹಾಯಕನ ಮೇಲೆ ಕೋರ್ಟ್ ಆವರಣದಲ್ಲಿ ಹಲ್ಲೆ : ನ್ಯಾಯಪೀಠ ಖಂಡನೆ

Update: 2019-09-12 17:13 GMT

ಹೊಸದಿಲ್ಲಿ, ಸೆ.12: ಅಯೋಧ್ಯೆ ಪ್ರಕರಣದಲ್ಲಿ ಮುಸ್ಲಿಮರ ಪರ ವಕಾಲತು ವಹಿಸಿದ್ದಕ್ಕೆ ತನಗೆ ಜೀವಬೆದರಿಕೆ ಕರೆ ಬಂದಿದೆ ಹಾಗೂ ತನ್ನ ಸಹಾಯಕನ ಮೇಲೆ ಗುರುವಾರ ನ್ಯಾಯಾಲಯದ ಆವರಣದಲ್ಲಿ ಹಲ್ಲೆ ನಡೆಸಲಾಗಿದೆ ಎಂದು ನ್ಯಾಯವಾದಿ ರಾಜೀವ್ ಧವನ್ ಸುಪ್ರೀಂಕೋರ್ಟ್‌ಗೆ ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಐವರು ನ್ಯಾಯಾಧೀಶರ ನ್ಯಾಯಪೀಠ, ಈ ರೀತಿಯ ಘಟನೆಗಳು ನ್ಯಾಯಾಲಯದಲ್ಲಿ ನಡೆಯಬಾರದು. ಇಂತಹ ಪರಿಸ್ಥಿತಿ ವಿಚಾರಣೆ ನಡೆಸಲು ಅನುಕೂಲಕರವಲ್ಲ. ನ್ಯಾಯಾಲಯದಲ್ಲಿ ಎರಡೂ ಕಡೆಯಲ್ಲೂ ನಿರ್ಭೀತಿಯಿಂದ ವಾದ ಮಂಡನೆಯಾಗಬೇಕು ಎಂದು ಹೇಳಿ ಘಟನೆಯನ್ನು ಖಂಡಿಸಿದೆ. ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ನ್ಯಾಯಪೀಠದ ಅಧ್ಯಕ್ಷರಾಗಿದ್ದಾರೆ. ಗುರುವಾರ ಅಯೋಧ್ಯೆ ಪ್ರಕರಣದ ಕುರಿತ ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಸುನ್ನಿ ವಕ್ಫ್ ಬೋರ್ಡ್ ಹಾಗೂ ಇತರರ ಪರ ವಕಾಲತ್ತು ವಹಿಸಿರುವ ಹಿರಿಯ ವಕೀಲ ರಾಜೀವ್ ಧವನ್ ತನಗೆ ಜೀವಬೆದರಿಕೆ ಕರೆ ಬಂದಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ನಿನ್ನನ್ನು ನ್ಯಾಯಾಲಯದ ಹೊರಗೆ ನೋಡಿಕೊಳ್ಳುತ್ತೇವೆ ಎಂದು ಫೇಸ್‌ಬುಕ್‌ನಲ್ಲಿ ಸಂದೇಶ ರವಾನಿಸಲಾಗಿದೆ. ನೀನು ರಾಮನ ವಿರುದ್ಧವಾಗಿದ್ದೀಯಾ ಎಂದು ಪ್ರಶ್ನಿಸಿ ಕೆಲವು ವ್ಯಕ್ತಿಗಳು ಸಂದೇಶ ಕಳುಹಿಸುತ್ತಿದ್ದಾರೆ ಎಂದರು.

ಇದನ್ನು ಒಪ್ಪಲಾಗದು. ಇಂತಹ ಘಟನೆ ನಡೆಯಬಾರದು ಎಂದು ಹೇಳಿದ ನ್ಯಾಯಪೀಠ, ನಿಮಗೆ ಭದ್ರತೆಯ ಅಗತ್ಯವಿದೆಯೇ ಎಂದು ಧವನ್‌ರನ್ನು ಪ್ರಶ್ನಿಸಿತು. ಭದ್ರತೆಯ ಅಗತ್ಯವಿಲ್ಲ, ನ್ಯಾಯಾಲಯ ಭರವಸೆ ಕೊಟ್ಟರೆ ಸಾಕು ಎಂದುತ್ತರಿಸಿದ ಧವನ್, ತಾನು ಹಿಂದುಗಳ ನಂಬಿಕೆಯ ವಿರುದ್ಧ ವಾದಿಸುತ್ತಿಲ್ಲ. ನ್ಯಾಯವಾದಿಯಾಗಿರುವ ತಾನು ವಕಾಲತ್ತು ವಹಿಸುವಾಗ ಪಕ್ಷಪಾತ ತೋರುವುದಿಲ್ಲ ಎಂದರು. ಧವನ್ ಸಹಾಯಕನ ಮೇಲೆ ನ್ಯಾಯಾಲಯದ ಆವರಣದಲ್ಲಿ ನಡೆದಿರುವ ಹಲ್ಲೆಯನ್ನು ನ್ಯಾಯಪೀಠ ಖಂಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News