×
Ad

ಮಂಗಳೂರು: ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಬ್ಯಾಗ್ ಕಳವು!

Update: 2019-09-12 22:56 IST

ಮಂಗಳೂರು, ಸೆ.12: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದುಬೈಗೆ ತೆರಳಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಬ್ಯಾಗ್‌ಗಳ ಲಾಕ್ ಒಡೆದು ಕಳವು ನಡೆಸಿದ ಆತಂಕಕಾರಿ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.  

ದುಬೈ ತಲುಪಿದ ಬಳಿಕ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಕಳವು ನಡೆದ ಘಟನೆ ಗಮನಕ್ಕೆ ಬಂದಿದೆ. ಆತಂಕಕ್ಕೊಳಗಾದ ಪ್ರಯಾಣಿಕರು ದುಬೈನಲ್ಲಿನ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಂದ ಮಂಗಳೂರು ಹಾಗೂ ಬೆಂಗಳೂರಿನ ಏರ್ ಇಂಡಿಯಾ ಕಚೇರಿಗಳಿಗೆ ಕಳವು ಘಟನೆಯ ಮಾಹಿತಿಯನ್ನು ಇ-ಮೇಲ್ ಮೂಲಕ ರವಾನಿಸಿದ್ದಾರೆ. ಆದರೆ ವಿಮಾನ ಸಂಸ್ಥೆಯಿಂದ ಇಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿದುಬಂದಿದೆ.

ಘಟನೆ ವಿವರ: 'ಸೆ.11ರಂದು ಬೆಳಗ್ಗೆ 9:30ಕ್ಕೆ ದುಬೈಗೆ ತೆರಳುವ ನಿರೀಕ್ಷೆಯಲ್ಲಿದ್ದ ಪ್ರಯಾಣಿಕರು ಬೆಳಗ್ಗೆ 8:30ಕ್ಕೇ ಲಗೇಜ್‌ಗಳನ್ನು ವಿಮಾನ ಸಂಸ್ಥೆಯ ಸಿಬ್ಬಂದಿಗೆ ಒಪ್ಪಿಸಿದ್ದರು. ವಿಮಾನ ಆಗಮನದಲ್ಲಿ ತಡವಾಗಲಿದೆ ಎನ್ನುವ ಸಂದೇಶ ಬಂದಿದೆ. ನಿಗದಿತ ಸಮಯಕ್ಕಿಂತ ಮೂರು ಗಂಟೆಗಳ ಕಾಲ ತಡವಾಗಿ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಫ್ಲೈಟ್ ನಂ.IX383 ವಿಮಾನವು ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯಿತು. ಬೆಳಗ್ಗೆ 11:45ಕ್ಕೆ ಪ್ರಯಾಣಿಕರು ಪಾಸ್‌ಪೋರ್ಟ್ ತಪಾಸಣೆ, ಬೋರ್ಡಿಂಗ್ ಪಾಸ್ ಪಡೆದುಕೊಂಡರು. ಆನಂತರ ವಿಮಾನವು 12:30ಕ್ಕೆ ಮಂಗಳೂರಿನಿಂದ ದುಬೈಗೆ ನಿರ್ಗಮಿಸಿತು' ಎಂದು ಪ್ರಯಾಣಿಕ, ಮಂಗಳೂರು ಗುರು-ಕಂಬಳ ನಿವಾಸಿ ಆಬಿದ್ ಹುಸೈನ್ ತಿಳಿಸಿದ್ದಾರೆ.

'ವಿಮಾನವು ಅಂದು ಮಧ್ಯಾಹ್ನ 2 ಗಂಟೆಗೆ (ಭಾರತೀಯ ಕಾಲಮಾನ 3:30) ದುಬೈ ತಲುಪಿತು. ವಿಮಾನದಿಂದ ಇಳಿದ ತಕ್ಷಣವೇ ನಮ್ಮ ಬ್ಯಾಗ್ ಇರುವ ವಿಭಾಗಕ್ಕೆ ತೆರಳಿದಾಗ ಬ್ಯಾಗ್ ನೋಡಿ ದಿಗ್ಭ್ರಮೆಯಾಯಿತು. ನನ್ನ ಎರಡು ಬ್ಯಾಗ್‌ಗಳ ಲಾಕ್‌ನ್ನು ತುಂಡು ತುಂಡು ಮಾಡಲಾಗಿತ್ತು. ನನ್ನ ಬ್ಯಾಗ್‌ನಲ್ಲಿ ಏನೂ ಕಳವಾಗಿರಲಿಲ್ಲ. ಆದರೆ ಕೇರಳದವರ ಬ್ಯಾಗ್‌ನಿಂದ ಎರಡು ಮೊಬೈಲ್‌ಗಳು ಹಾಗೂ ಭಟ್ಕಳದವರ ಬ್ಯಾಗ್‌ನಿಂದ ವಾಚ್ ಸೇರಿದಂತೆ ವಿವಿಧ ವಸ್ತುಗಳು ಕಾಣೆಯಾಗಿದ್ದವು' ಎಂದು ಅವರು ಆರೋಪಿಸಿದರು.

'ಕೂಡಲೇ ವಿಮಾನ ನಿಲ್ದಾಣ ಸಿಬ್ಬಂದಿ ಸಂಪರ್ಕಿಸಿ ಏರ್ ಇಂಡಿಯಾ ಅಧಿಕಾರಿ ಕಚೇರಿಗೆ ತೆರಳಿ ಘಟನೆ ವಿವರಿಸಿ ದೂರು ನೀಡಿದೆವು. ದೂರಿನ ಪ್ರತಿಯನ್ನು ಮಂಗಳೂರು ಹಾಗೂ ಬೆಂಗಳೂರಿನ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕಚೇರಿಗಳಿಗೂ ಈ-ಮೇಲ್ ಮೂಲಕ ಕಳುಹಿಸಿದೆವು. ಆದರೆ ಇಲ್ಲಿಯವರೆಗೆ ಯಾರೂ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ' ಎಂದು ಸಂತ್ರಸ್ತ ಆಬಿದ್ ಹುಸೈನ್ ಅಳಲು ತೋಡಿಕೊಂಡರು.

ಕೃತ್ಯಕ್ಕೆ ಯಾರು ಹೊಣೆ?

"ವಿಮಾನದಲ್ಲಿ ಬ್ಯಾಗ್ ಲಾಕ್ ಮುರಿದು ಕಳವು ನಡೆಸಿದ ಘಟನೆ ನಡೆದಿದೆ. ನಮ್ಮ ವಸ್ತುಗಳು ಕಳವಾದರೂ ಪರವಾಗಿಲ್ಲ. ಆದರೆ ಬ್ಯಾಗ್ ಲಾಕ್ ತೆಗೆದು ಅದರಲ್ಲಿ ವಿದೇಶಿ ಕರೆನ್ಸಿ, ಮಾದಕ ವಸ್ತು ಅಥವಾ ಶಸ್ತ್ರಾಸ್ತ್ರಗಳನ್ನು ಯಾರಾದರೂ ಇಟ್ಟು ನಮ್ಮನ್ನು ಸಿಕ್ಕಿಹಾಕಿಸಿದರೆ ಇಂತಹ ಸಂದರ್ಭ ಯಾರು ಹೊಣೆಗಾರಿಕೆ ಹೊರುತ್ತಾರೆ. ದುಬೈನಲ್ಲಿ ಕಠಿಣ ಶಿಕ್ಷೆಗಳಿವೆ. ನಮ್ಮನ್ನು ಕಡಿದೇ ಹಾಕುತ್ತಾರೆ. ದೇಶಕ್ಕೆ ವಾಪಸಾಗುವುದು ಶೇ.100ರಷ್ಟು ಅಸಾಧ್ಯ" ಎಂದು ಸಂತ್ರಸ್ತ ಪ್ರಯಾಣಿಕ ಆಬಿದ್ ಹುಸೈನ್ ಅಶ್ರುತರ್ಪಣ ಮನೋಭಾವನೆಯ ಆತಂಕ ವ್ಯಕ್ತಪಡಿಸಿದ್ದಾರೆ.

ಸಂಸ್ಥೆಯ ವಿಮಾನದಲ್ಲಿ ಇಂತಹ ಘಟನೆ ನಡೆದಿದೆ ಎಂಬ ಯಾವುದೇ ಮಾಹಿತಿ ನಮಗೆ ಬಂದಿಲ್ಲ. ಯಾವುದೇ ಇ-ಮೇಲ್ ಕೂಡ ಬಂದಿಲ್ಲ.

- ಪ್ರದೀಪ್, ಮ್ಯಾನೇಜರ್, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News