×
Ad

ಖ್ಯಾತ ಮಹಿಳಾ ಉದ್ಯಮಿಯ ನಿಗೂಢ ಸಾವು: ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

Update: 2019-09-12 23:14 IST

 ಚೆನ್ನೈ,ಸೆ.12: 100 ಮಿಲಿಯನ್ ಡಾಲರ್ ವೌಲ್ಯದ ಉದ್ಯಮ ಸಂಸ್ಥೆ ಲಾನ್ಸನ್ ಗ್ರೂಪ್‌ನ ಜಂಟಿ ಆಡಳಿತ ನಿರ್ದೇಶಕಿ ರೀಟಾ ಲಂಕಾಲಿಂಗಂ(49) ಅವರು ಗುರುವಾರ ಬೆಳಿಗ್ಗೆ ನುಂಗಂಬಾಕ್ಕಂನಲ್ಲಿಯ ತನ್ನ ಬಂಗಲೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಲಾನ್ಸನ್ ಗ್ರೂಪ್ ಟೊಯೊಟಾ ಕಾರುಗಳ ಪ್ರಮುಖ ಡೀಲರ್ ಆಗಿದ್ದು,ರೀಟಾರ ಪತಿ ಲಂಕಾಲಿಂಗಂ ಮುರುಗೇಶ ಅವರು ಸಂಸ್ಥೆಯ ಆಡಳಿತ ನಿರ್ದೇಶಕರಾಗಿದ್ದಾರೆ.

ನಿವಾಸದಲ್ಲಿ ಸುಪರ್‌ವೈಸರ್ ಆಗಿ ಕೆಲಸ ಮಾಡುತ್ತಿರುವ ಏಸುಪಾದಂ ಬೆಳಿಗ್ಗೆ ಬಂದಾಗ ರೀಟಾ ಸಾವನ್ನಪ್ಪಿರುವುದು ಬೆಳಕಿಗೆ ಬಂದಿತ್ತು. ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಲ್ಪಾಕ್ ಮೆಡಿಕಲ್ ಕಾಲೇಜಿಗೆ ಸಾಗಿಸಿದರು.

ಪೊಲೀಸರ ಪ್ರಾಥಮಿಕ ತನಿಖೆಯು ರೀಟಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದನ್ನು ಸೂಚಿಸಿದೆ,ಆದರೆ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ.

ಆತ್ಮಹತ್ಯೆ ಸಾವಿಗೆ ಕಾರಣವಾಗಿರುವ ಹೆಚ್ಚಿನ ಸಾಧ್ಯತೆಯಿದೆ,ಆದರೆ ತನಿಖೆಯ ಬಳಿಕವಷ್ಟೇ ಇದು ದೃಢಪಡಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರೀಟಾ ಪತಿ,ಓರ್ವ ಪುತ್ರ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಲಾನ್ಸನ್ ಗ್ರೂಪ್ ಕಾರುಗಳ ಮಾರಾಟ,ಆಹಾರೋತ್ಪನ್ನ ತಯಾರಿಕೆ ಮತ್ತು ರಫ್ತು,ಬಯಾಟೆಕ್ನಾಲಜಿ ಇತ್ಯಾದಿ ಉದ್ಯಮಗಳಲ್ಲಿ ತೊಡಗಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News