ವೀರ ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದಿಂದ 'ನಮ್ಮ ಅಬ್ಬಕ್ಕ - 2019'

Update: 2019-09-12 17:47 GMT

ಮಂಗಳೂರು: ಪೋರ್ಚುಗೀಸರ ವಿರುದ್ಧ ಹೋರಾಡಿದ ಉಳ್ಳಾಲದ ಅಬ್ಬಕ್ಕ ರಾಣಿಯ ಕುರಿತು ಕಾರ್ಯಕ್ರಮಗಳನ್ನು ನಡೆಸುವುದಕ್ಕಾಗಿ ಸಂಘ ಸಂಸ್ಥೆಗಳನ್ನು ಸ್ಥಾಪಿಸುವುದು ಉತ್ತಮ ಬೆಳವಣಿಗೆ. ಈ ನಿಟ್ಟಿನಲ್ಲಿ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ ಮತ್ತು ಉಳ್ಳಾಲದ ಸ್ಥಳೀಯ ಸಮಿತಿ ಒಳ್ಳೆಯ ಆಶಯಗಳನ್ನು ಹೊಂದಿವೆ. ಸರಕಾರದ ಅನುದಾನದಿಂದ ವರ್ಷಕ್ಕೊಂದು ಬಾರಿ ನಡೆಯುವ 'ವೀರರಾಣಿ ಅಬ್ಬಕ್ಕ ಉತ್ಸವ'ವನ್ನು ಇತ್ತಂಡಗಳ ಸಹಯೋಗದಿಂದಲೇ ನಡೆಸಲಾಗುವುದು ಎಂದು ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.

ನಗರದ ಪುರಭವನದಲ್ಲಿ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ನಡೆದ 'ನಮ್ಮ ಅಬ್ಬಕ್ಕ- 2019' ಶ್ರಾವಣ ಸಂಭ್ರಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಅಬ್ಬಕ್ಕನ ಹೆಸರು, ಹಿರಿಮೆಯನ್ನು ಉಳಿಸುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು. ಅಬ್ಬಕ್ಕ ವಿಚಾರದಲ್ಲಿ ಎಲ್ಲರೂ ಒಂದಾಗಿ ಕೆಲಸ ನಿರ್ವಹಿಸಬೇಕು. ಶಾಲಾ-ಕಾಲೇಜುಗಳಲ್ಲಿ ರಾಣಿ ಅಬ್ಬಕ್ಕಳ ಬಗ್ಗೆ ಕ್ವಿಝ್, ಪ್ರಬಂಧ ಸ್ಪರ್ಧೆಗಳನ್ನು ನಡೆಸಿ, ಶಾಲಾ ಮಟ್ಟದಲ್ಲಿಯೇ ಅಬ್ಬಕ್ಕಳ ಇತಿಹಾಸ ಹೇಳುವ ಪ್ರಯತ್ನ ನಡೆಯಬೇಕಿದೆ ಎಂದವರು ತಿಳಿಸಿದರು. ಉದ್ಯಮಿ ಊರ್ಮಿಳಾ ರಮೇಶ್ ಕುಮಾರ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

‘ಅಬ್ಬಕ್ಕ ಚರಿತ್ರೆಯ ಸಮಗ್ರ ಅಧ್ಯಯನವಾಗಬೇಕು’

ಆಶಯ ಭಾಷಣ ಮಾಡಿದ ಹಂಪಿ ವಿ.ವಿ.ಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎ.ವಿ.ನಾವಡ ಮಾತನಾಡಿ, “ಅಬ್ಬಕ್ಕನ ಸಾಧನೆ, ಉತ್ಸವಗಳು ಕೇವಲ ದಕ್ಷಿಣ ಕನ್ನಡ ಜಿಲ್ಲೆಗೆ ಸೀಮಿತವಾಗಬಾರದು. ಆಕೆಯ ಇತಿಹಾಸ ದೇಶದಾದ್ಯಂತ ಪಸರಿಸಬೇಕು. ಸ್ವಾತಂತ್ರ್ಯಕ್ಕೆ ಹೋರಾಡಿದ ವೀರ ಮಹಿಳೆಯರ ಸಾಲಿನಲ್ಲಿ ಅಬ್ಬಕ್ಕನ ಹೆಸರು ಕೂಡಾ ಮುಂಚೂಣಿಯ ಸ್ಥಾನದಲ್ಲಿ ಇರಬೇಕು'ಎಂದರು. ‘ಅಬ್ಬಕ್ಕನ ಚರಿತ್ರೆಯ ಸಮಗ್ರ ಅಧ್ಯಯನ ನಡೆಯಬೇಕಾಗಿದೆ. ಅಬ್ಬಕ್ಕನಿಗೆ ಸಂಬಂಧಿಸಿದ ಸಾಹಿತ್ಯಗಳು ಒಂದೇ ಸೂರಿನಲ್ಲಿ ಲಭ್ಯವಾಗಬೇಕು. ಮಂಗಳೂರಿನ ವಿಮಾನ ನಿಲ್ದಾಣ ಅಥವಾ ರೈಲ್ವೆ ನಿಲ್ದಾಣಕ್ಕೆ ಅಬ್ಬಕ್ಕನ ಹೆಸರಿಡಲು ಜನಪ್ರತಿನಿಧಿಗಳು ತಮ್ಮ ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ನುಡಿದರು.'

'ಕಿತ್ತೂರು ಚೆನ್ನಮ್ಮ ಉತ್ಸವ, ಹಂಪಿ ಉತ್ಸವ, ಬನವಾಸಿ ಉತ್ಸವ ಸರ್ಕಾರದ ಮಟ್ಟದಲ್ಲಿ ವೈಭವದಿಂದ ನಡೆಯುತ್ತಿದೆ. ಆದರೆ ಅಬ್ಬಕ್ಕನ ಉತ್ಸವಕ್ಕೆ ಅಂತಹ ಮಾನ್ಯತೆ ದೊರೆತಿಲ್ಲ. ರಾಣಿ ಅಬ್ಬಕ್ಕ ಸ್ವಾತಂತ್ರ್ಯ ಹೋರಾಟಗಾರ್ತಿ ಎಂದು ಗುರುತಿಸುವ ಕಾರ್ಯವೂ ಆಗಿಲ್ಲ. ಕಿತ್ತೂರು ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಸಾಲಿನಲ್ಲಿ ಅಬ್ಬಕ್ಕನ ಹೆಸರು ಕೂಡಾ ಕಾಣಿಸಿಕೊಳ್ಳಬೇಕು. ಹಿರಿಯ ವಿದ್ವಾಂಸರು, ಇತಿಹಾಸ ತಜ್ಞರು ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು ' ಎಂದು ಎ.ವಿ. ನಾವಡ ಹೇಳಿದರು.

ಮಂಗಳೂರು ವಿ.ವಿ. ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು.

ಅಬ್ಬಕ್ಕ ಪುರಸ್ಕಾರ: ವಿರಾಂಟ್ ವತಿಯಿಂದ ಕೊಡಮಾಡುವ 'ರಾಣಿ ಅಬ್ಬಕ್ಕ ಸೇವಾ ಪುರಸ್ಕಾರ'ವನ್ನು ಉಳ್ಳಾಲ ಮೊಗವೀರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ ಅವರಿಗೆ ಪ್ರದಾನ ಮಾಡಲಾಯಿತು. ಗೀತಾ ಜೆ.ಸಲ್ದಾನ ಸಮ್ಮಾನ ಪತ್ರ ವಾಚಿಸಿದರು. ಇದೇ ಸಂದರ್ಭದಲ್ಲಿ ಈ ವರ್ಷದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ತ್ಯಾಗಂ ಹರೇಕಳ ಮತ್ತು ನೆಲ್ಸನ್ ಮಂಡೇಲಾ ಅಂತಾರಾಷ್ಟ್ರೀಯ ಪ್ರಶಸ್ತಿ ಗಳಿಸಿದ ಕೆ.ಲಕ್ಷ್ಮೀನಾರಾಯಣ ರೈ ಹರೇಕಳ ಅವರನ್ನು ವಿರಾಂಟ್ ಪರವಾಗಿ ಅಭಿನಂದಿಸಲಾಯಿತು.

ದ.ಕ. ಜಿಪಂ.ಉಪಾಧ್ಯಕ್ಷೆ ಕಸ್ತೂರಿ ಪಂಜ, ಬ್ಯಾಂಕ್ ಆಫ್ ಬರೋಡಾದ ಸೀನಿಯರ್ ಮ್ಯಾನೇಜರ್ ಸಂದೀಪ್ ಶೆಟ್ಟಿ.ಎಚ್., ಲಯನ್ಸ್ ಜಿಲ್ಲಾ ಉಪ ಗವರ್ನರ್ ಡಾ.ಗೀತಾ ಪ್ರಕಾಶ್, ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ, ಸಾರಂಗ್ ಸಮುದಾಯ ಬಾನುಲಿ ನಿರ್ದೇಶಕ ಫಾ.ಡಾ.ಮೆಲ್ವಿನ್ ಪಿಂಟೊ, ಸಿಎ ಎಸ್.ಎಸ್.ನಾಯಕ್, ಭಾಗವತ ಸತೀಶ್ ಶೆಟ್ಟಿ ಪಟ್ಲ, ದೆಹಲಿ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ, ಉದ್ಯಮಿಗಳಾದ ಪ್ರಸಾದ್ ಕಾಂಚನ್, ರವಿಶಂಕರ್, ಹೇಮಂತ ರೈ ಮನವಳಿಕೆ, ಗೋವರ್ಧನ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.

ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್.ಜಿ., ಜಿಪಂ ಸದಸ್ಯೆ ಮಮತಾ ಗಟ್ಟಿ, ಮಾಜಿ ಅಕಾಡೆಮಿ ಸದಸ್ಯರಾದ ವಿ.ಜಿ.ಪಾಲ್, ಎ.ಶಿವಾನಂದ ಕರ್ಕೇರ, 'ವಿರಾಂಟ್ ' ಅಧ್ಯಕ್ಷ ಹರಿಕೃಷ್ಣ ಪುನರೂರು, ಪ್ರಧಾನ ಸಂಚಾಲಕ ರವೀಂದ್ರ ಶೆಟ್ಟಿ ಉಳಿದೊಟ್ಟು,ಸಂಘಟನಾ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್, ಸಾಂಸ್ಕೃತಿಕ ಕಾರ್ಯದರ್ಶಿ ಕೆ.ಲಕ್ಷ್ಮೀನಾರಾಯಣ ರೈ ಹರೇಕಳ  ಮುಂತಾದವರು ಉಪಸ್ಥಿತರಿದ್ದರು.

ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿರಾಂಟ್ ನಡೆದು ಬಂದ ದಾರಿ ಮತ್ತು ಅದರ ಧ್ಯೇಯ-ಧೋರಣೆಗಳನ್ನು ವಿವರಿಸಿದರು. ಕೋಶಾಧಿಕಾರಿ ಪಿ.ಡಿ.ಶೆಟ್ಟಿ ಸ್ವಾಗತಿಸಿದರು. ಅರುಣ್ ಉಳ್ಳಾಲ್ ಮತ್ತು ವಿಜಯಲಕ್ಷ್ಮಿ ಕಟೀಲು ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾ ಸಂಚಾಲಕ ತ್ಯಾಗಂ ಹರೇಕಳ ವಂದಿಸಿದರು.

ಸಾಂಸ್ಕೃತಿಕ ವೈವಿಧ್ಯ:

ಅಪರಾಹ್ನ 'ನಮ್ಮ ಅಬ್ಬಕ್ಕ-ಶ್ರಾವಣ ಸಂಭ್ರಮ' ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಸತೀಶ್ ಪಟ್ಲ ಮತ್ತು ಭವ್ಯಶ್ರೀ ಕುಲ್ಕುಂದ ಅವರ ಭಾಗವತಿಕೆಯಲ್ಲಿ 'ವೀರವನಿತೆ ಅಬ್ಬಕ್ಕ' ಯಕ್ಷಗಾನ ತಾಳಮದ್ದಳೆ ಜರಗಿತು. ಸಭಾಕಲಾಪದ ಬಳಿಕ ಫಜೀರು ನೃತ್ಯ ಲಹರಿ ನಾಟ್ಯಾಲಯದ 'ಬನ್ನಿ ಅಬ್ಬಕ್ಕನ ನಾಡಿಗೆ ' ಸ್ವಾಗತ ನೃತ್ಯ; ವೈಷ್ಣವಿ ಕಲಾವಿದರು ಕೊಯಿಲ ಅವರಿಂದ 'ಕುಸೆಲ್ದ ಗೌಜಿ' ತುಳು ಹಾಸ್ಯ ಪ್ರಹಸನ, ರಾಜ್ಯಮಟ್ಟದ ಕಲರ್ಸ್ ಕನ್ನಡ ಕೋಗಿಲೆ ಗಾಯಕರಾದ ಗಣೇಶ್ ಕಾರಂತ್ ಬೆಂಗಳೂರು ಮತ್ತು ಮಾಲಿನಿ ಕೇಶವ ಪ್ರಸಾದ್ ಅವರಿಂದ 'ದೇಶಭಕ್ತಿ - ಸುಗಮಸಂಗೀತ'  ಗಾನ ಗುಂಜಾರವ ಜರಗಿತು‌. ವಿರಾಂಟ್ ಉಪಾಧ್ಯಕ್ಷ ಕೆ.ತಾರಾನಾಥ ರೈ ಕೋಟೆಕಾರ್ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ತೋನ್ಸೆ ಪುಷ್ಕಳ ಕುಮಾರ್ ಸಂಯೋಜಿಸಿದ್ದರು.

ಅಧ್ಯಯನ ಪೀಠ ಮತ್ತಷ್ಟು ಚುರುಕು

ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ ಪಿ.ಎಸ್. ಎಡಪಡಿತ್ತಾಯ ಮಾತನಾಡಿ, ವಿ.ವಿ.ಯಲ್ಲಿರುವ ರಾಣಿ ಅಬ್ಬಕ್ಕ ಅಧ್ಯಯನ ಪೀಠ ಮತ್ತಷ್ಟು ಚುರುಕುಗೊಳಿಸುವ ಕೆಲಸ ಮಾಡುತ್ತೇವೆ. ಮುಂಬರುವ ದಿನಗಳಲ್ಲಿ ರಾಣಿ ಅಬ್ಬಕ್ಕ ಕುರಿತಾದ ನಾಟಕಗಳನ್ನು ವಿ.ವಿ.ಯಲ್ಲಿ ಪ್ರದರ್ಶಿಸಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು. ರಾಣಿ ಅಬ್ಬಕ್ಕ ಅಧ್ಯಯನ ಪೀಠಕ್ಕೆ ರಾಜ್ಯ ಸರಕಾರದಿಂದ ಇನ್ನೂ ಯಾವುದೇ ಅನುದಾನ ಬಂದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News