ಟ್ರಾಫಿಕ್ ಪೊಲೀಸರಿಂದ ಕರ್ತವ್ಯ ಲೋಪ ಆರೋಪ: ಉಡುಪಿ ಎಸ್ಪಿ ಸ್ಪಷ್ಟನೆ

Update: 2019-09-13 15:36 GMT

ಉಡುಪಿ, ಸೆ.13: ಉಡುಪಿ ಪಿಪಿಸಿ ರಸ್ತೆಯ ಮೀನು ಮಾರುಕಟ್ಟೆ ಬಳಿ ಸೆ.12 ರಂದು ಮಧ್ಯಾಹ್ನ ಸಂಚಾರ ಪೊಲೀಸ್ ಸಿಬ್ಬಂದಿಯೊಬ್ಬರು ಸಮವಸ್ತ್ರ ಧರಿಸದೆ ದಂಡ ವಸೂಲಿ ಮಾಡಿರುವುದಾಗಿ ಆರೋಪಿಸಿ ಬೈಕ್ ಸವಾರರೊಬ್ಬರು ಪೊಲೀಸರೊಂದಿಗೆ ನಡೆಸಿದ ವಾಗ್ವಾದದ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿರುವ ಎಸ್ಪಿ ನಿಶಾ ಜೇಮ್ಸ್, ಪೊಲೀಸರು ಕರ್ತವ್ಯದಲ್ಲಿ ಯಾವುದೇ ಲೋಪ ಎಸಗಿರುವುದಿಲ್ಲ ಎಂದು ತಿಳಿಸಿದ್ದಾರೆ.

ಉಡುಪಿ ಸಂಚಾರ ಪೊಲೀಸ್ ಠಾಣಾ ಎಸ್ಸೈ ನಾರಾಯಣ ಗಾಣಿಗ ಇಲಾಖಾ ಜೀಪಿನಲ್ಲಿ ಸಿಬ್ಬಂದಿಗಳೊಂದಿಗೆ ಸಮವಸ್ತ್ರದಲ್ಲಿ ವಾಹನ ತಪಾಸಣೆ ನಡೆಸಿ, ಮೋಟಾರು ವಾಹನ ಕಾಯ್ದೆ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಿ, ದಂಡವನ್ನು ಸಂಗ್ರಹಿಸುತ್ತಿದ್ದು, ಈ ಸಂದರ್ಭ ಒಟ್ಟು 11 ಪ್ರಕರಣ ಗಳನ್ನು ದಾಖಲಿಸಿಕೊಂಡಿದ್ದರು.

ಈ ಮಾರ್ಗದಲ್ಲಿ ಸಂಜೆ 5:20ರ ಸುಮಾರಿಗೆ ಕೆಎ20 ಡಬ್ಲೂ 5102 ನಂಬರಿನ ಬೈಕನ್ನು ಸವಾರ ಹೆಲ್ಮೆಟ್ ಧರಿಸದೆ ಚಲಾಯಿಸಿಕೊಂಡು ಬರುತ್ತಿದ್ದು, ಪೊಲೀಸರು ಆತನನ್ನು ನಿಲ್ಲಿಸಿದಾಗ, ಆತ ಯಾರಿಗೋ ಕರೆ ಮಾಡಿ ಮಾತನಾಡಿ ದ್ದನು. ಸ್ಪಲ್ಪಸಮಯದಲ್ಲಿಯೇ ಮತ್ತೊಬ್ಬ ವ್ಯಕ್ತಿ ಸ್ಥಳಕ್ಕೆ ಬಂದು ಇಲಾಖಾ ಜೀಪಿನ ಎದುರು ಅಡ್ಡ ನಿಂತು ನೀವು ಇಲ್ಲಿ ಯಾಕೆ ಕೇಸು ಹಾಕುವುದು, ಕೆಳಗೆ ಇಳಿಯಿರಿ ಎಂದು ಎಸ್ಸೈಯನ್ನುದ್ದೇಶಿಸಿ ಕೂಗಾಡಲು ಪ್ರಾರಂಭಿಸಿದನು.

ಆಗ ಸ್ಥಳದಲ್ಲಿ ಜನರು ಸೇರುತ್ತಿರುವುದನ್ನು ಗಮನಿಸಿದ ಎಸ್ಸೈ ಠಾಣೆಗೆ ಮಾಹಿತಿ ನೀಡಿದ್ದು, ಅದರಂತೆ ಠಾಣಾ ಪ್ರಭಾರ ಕರ್ತವ್ಯದಲ್ಲಿದ್ದ ಸುಕುಮಾರ್ ಶೆಟ್ಟಿ ಹಾಗೂ ಸಿಬ್ಬಂದಿ ಕೊರತೆ ಇದ್ದ ಕಾರಣ ಹಿಂದಿನ ದಿನ ರಾತ್ರಿ ಕರ್ತವ್ಯವನ್ನು ನಿರ್ವಹಿಸಿ, ಘಟನೆ ದಿನವೂ ಸಹ ರಾತ್ರಿ ಕರ್ತವ್ಯಕ್ಕೆ ನಿಯೋಜನೆಗೊಂಡ ಸಾದಾ ಉಡುಪಿನಲ್ಲಿದ್ದ ಸಿಬ್ಬಂದಿ ಮಲ್ಲೇಶ ಸ್ಥಳಕ್ಕೆ ಬಂದರು. ಆಗ ಮಲ್ಲೇಶ್ ಆ ವ್ಯಕ್ತಿಗೆ ಸಮಾಧಾನ ಮಾಡುತ್ತಿದ್ದಾಗ ಆ ವ್ಯಕ್ತಿ ಮಲ್ಲೇಶರನ್ನುದ್ದೇಶಿಸಿ ನೀವು ಯಾರು, ನನಗೆ ಹೇಳುವುದು ಎಂದು ಏರುಧ್ವನಿಯಲ್ಲಿ ಜೋರು ಮಾಡಿದ್ದಾರೆ. ನಂತರ ಸ್ಥಳದಲ್ಲಿ ಹೆಚ್ಚಿನ ಜನರು ಸೇರುವುದನ್ನು ಕಂಡ ಆ ವ್ಯಕ್ತಿ ಬೈಕಿನಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ಕುಳ್ಳಿರಿಸಿಕೊಂಡು ಅಲ್ಲಿಂದ ಹೊರಟು ಹೋಗಿದ್ದಾನೆ.
ಎಸ್ಸೈ ಸಮವಸ್ತ್ರದಲ್ಲಿ ಇತರ ಸಿಬ್ಬಂದಿಯವರೊಂದಿಗೆ ಕರ್ತವ್ಯ ನಿರ್ವಹಿಸಿದ್ದು, ಸರಕಾರ ಹೊರಡಿಸಿದ ಸುತ್ತೋಲೆಯ ಆದೇಶದಂತೆ ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದರು. ಅವರು ಕರ್ತವ್ಯದಲ್ಲಿ ಯಾವುದೇ ಲೋಪ ಎಸಗಿರುವುದಿಲ್ಲ ಎಂದು ಎಸ್ಪಿ ನಿಶಾ ಜೇಮ್ಸ್ ಹೇಳಿಕೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಕರ್ತವ್ಯ ಅಡ್ಡಿ ಪ್ರಕರಣ ದಾಖಲು

ಮೋಟಾರು ವಾಹನ ಕಾಯ್ದೆಯಂತೆ ವಾಹನಗಳನ್ನು ತಪಾಸಣೆ ನಡೆಸುತ್ತಿ ರುವ ಬಗ್ಗೆ ತಿಳಿ ಹೇಳಿದರೂ ಬೈಕಿನ ದಾಖಲೆ ಪತ್ರಗಳನ್ನು ಪರಿಶೀಲಿಸಲು ಅಡ್ಡಿ ಪಡಿಸಿ, ಇಲಾಖಾ ಜೀಪಿನ ಎದುರು ನಿಂತು ಜೀಪು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಮಹಮ್ಮದ್ ಹ್ಯಾರೀಸ್ ವಿರುದ್ಧ ಉಡುಪಿ ಸಂಚಾರ ಪೊಲೀಸ್ ಠಾಣೆಯ ಎಸ್ಸೈ ನಾರಾಯಣ ಗಾಣಿಗ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News