ದಲಿತ ದೌರ್ಜನ್ಯ ಕಾಯ್ದೆಯ ಮರುಪರಿಶೀಲನೆ ತ್ರಿಸದಸ್ಯ ನ್ಯಾಯಪೀಠಕ್ಕೆ ವರ್ಗಾಯಿಸಿದ ಸುಪ್ರೀಂ

Update: 2019-09-13 15:32 GMT

ಹೊಸದಿಲ್ಲಿ, ಸೆ.13: ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಆರೋಪಿಗಳನ್ನು ಏಕಾಏಕಿಯಾಗಿ ಬಂಧಿಸುವುದನ್ನು ನಿಷೇಧಿಸಿ 2018ರ ಮಾರ್ಚ್‌ನಲ್ಲಿ ತಾನು ನೀಡಿದ್ದ ತೀರ್ಪಿನ ಮರುಪರಿಶೀಲನೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಮೂವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠಕ್ಕೆ ವರ್ಗಾಯಿಸಿದೆ.

1989ರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟಪಂಗಡದ ಕಾಯ್ದೆ ( ದಲಿತ ದೌರ್ಜನ್ಯ ತಡೆ)ಯಡಿ, ಆರೋಪಿಗಳನ್ನು ಏಕಾಏಕಿಯಾಗಿ ಬಂದಿಸುವುದನ್ನು ಹಾಗೂ ಅವರ ವಿರುದ್ಧ ಪ್ರಕರಣ ದಾಖಲಿಸುವುದಕ್ಕೆ ಕಳೆದ ವರ್ಷ ನ್ಯಾಯಾಲಯ ನಿಷೇಧ ಹೇರಿತ್ತು .ದಲಿತ ಸಮುದಾಯಗಳು ನಿಂದನೆ ಹಾಗೂ ತಾರತಮ್ಯಕ್ಕೊಳಗಾಗುವುದನ್ನು ತಡೆಯುವ ಉದ್ದೇಶದಿಂದ ರೂಪಿಸಲಾದ ಈ ಕಾನೂನಿನಲ್ಲಿ ಬದಲಾವಣೆಗಳನ್ನು ಮಾಡುವುದನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿದ್ದವು.

ದಲಿತ ದೌರ್ಜನ್ಯ ತಡೆ ಕಾಯ್ದೆಯಲ್ಲಿ ಬದಲಾವಣೆ ಮಾಡುವುದನ್ನು ಮರುಪರಿಶೀಲಿಸಬೇಕೆಂದು ಕೇಂದ್ರ ಸರಕಾರವು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ಪರಿಶಿಷ್ಟಜಾತಿ/ಪಂಗಡಗಳ ನೈತಿಕ ಸ್ಥೆರ್ಯದ ಮೇಲೆ ಗಂಭೀರ ಪರಿಣಾಮವುಂಟಾಗಿದೆಯೆಂದು ಕೇಂದ್ರ ಸರಕಾರ ವಾದಿಸಿತ್ತು.

 ಆದರೆ ನ್ಯಾಯಾಲಯವು ತನ್ನ ತೀರ್ಪಿಗೆ ತಕ್ಷಣವೇ ತಡೆಯಾಜ್ಞೆ ನೀಡದೆ ಇದ್ದಾಗ ಕೇಂದ್ರ ಸರಕಾರವು ದಲಿತ ದೌರ್ಜನ್ಯ ಪ್ರಕರಣಗಳಲ್ಲಿ ಆರೋಪಿಗಳನ್ನು ತಕ್ಷಣವೇ ಬಂಧಿಸುವುದಕ್ಕೆ ಪೊಲೀಸರಿಗೆ ಅಧಿಕಾರ ನೀಲು ಹಾಗೂ ಆರೋಪಿಗಳಿಗೆ ಜಾಮೀನು ನಿರಾಕರಿಸುವ ನಿಟ್ಟಿನಲ್ಲಿ ವಿಧೇಯಕವೊಂದನ್ನು ಮಂಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News