ಉಡುಪಿ: 15ಕ್ಕೆ ಓಣಂ ಹಬ್ಬದ ಆಚರಣೆ
ಉಡುಪಿ, ಸೆ.13: ಕೇರಳ ಕಲ್ಚರಲ್ ಎಂಡ್ ಸೋಶಿಯಲ್ ಸೆಂಟರ್ ಉಡುಪಿ ಇದರ 27ನೇ ವಾರ್ಷಿಕೋತ್ಸವ ಹಾಗೂ ಓಣಂ ಹಬ್ಬದ ಆಚರಣೆ ಲಯನ್ಸ್ ಕ್ಲಬ್ ಇಂಟರ್‌ನೇಷನಲ್ ಜಿಲ್ಲೆ 317ಸಿ ಇದರ ಸಹಭಾಗಿತ್ವದಲ್ಲಿ ಸೆ.15ರ ರವಿವಾರ ಬನ್ನಂಜೆಯಲ್ಲಿರುವ ಶ್ರೀನಾರಾಯಣಗುರು ಸಭಾಭವನದಲ್ಲಿ ನಡೆಯಲಿದೆ ಎಂದು ಕೇಂದ್ರದ ಅಧ್ಯಕ್ಷ ಪಿ.ಎ.ಮೋಹನದಾಸ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಓಣಂ ಹಬ್ಬ ಕೇರಳಿಗರ ಶ್ರೇಷ್ಠ ಹಬ್ಬವಾಗಿದ್ದು, ಜಾತಿ ಮತ ಭೇದಭಾವವಿಲ್ಲದೇ ಆಚರಿಸುವ ಏಕೈಕ ಹಬ್ಬವಾಗಿ ಖ್ಯಾತಿ ಪಡೆದಿದೆ. ಈ ಹಬ್ಬದ ಆಚರಣೆ ವೇಳೆ ಅತ್ಯಾಕರ್ಷಕ ಬಣ್ಣ ಬಣ್ಣದ ಹೂಗಳ ಎಸಳುಗಳಿಂದ ರಂಗೋಲಿಯನ್ನು ಹಾಕು ವುದು ರೂಢಿಯಲ್ಲಿದೆ. ಹಬ್ಬದ ಅಂಗವಾಗಿ ಈ ಬಾರಿಯೂ ‘ಪೂಕಳಂ’ ರಂಗೋಲಿ ಸ್ಪರ್ಧೆ ಬೆಳಗ್ಗೆ ನಡೆಯಲಿದೆ ಎಂದರು.
ಸಂಘದ ವಾರ್ಷಿಕೋತ್ಸವ ಹಾಗೂ ಓಣಂ ಹಬ್ಬದ ಆಚರಣೆಯ ಸಭಾ ಕಾರ್ಯಕ್ರಮ ಬೆಳಗ್ಗೆ 11ಗಂಟೆಗೆ ನಡೆಯಲಿದೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿ ಗಳಾಗಿ ಶಾಸಕ ಕೆ.ರಘುಪತಿ ಭಟ್, ಲಯನ್ಸ್ ಜಿಲ್ಲೆ 317ಸಿ ಗವರ್ನರ್ ವಿ.ಜಿ.ಶೆಟ್ಟಿ, ಮಾಹೆ ವಿವಿಯ ಮಾಜಿ ಕುಲಪತಿ ಹಾಗೂ ರಾಷ್ಟ್ರೀಯ ಸಂಶೋಧನಾ ಪ್ರಾಧ್ಯಾಪಕ ಡಾ.ಎಂ.ಎಸ್.ವಲಿಯತ್ತಾನ್, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್, ಖ್ಯಾತ ತುಳು ಹಾಸ್ಯ ನಟ ಅರವಿಂದ ಬೋಳಾರ್ ಭಾಗವಹಿಸಲಿದ್ದಾರೆ.
ಕಳೆದ ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳಿಸಿ ತೇರ್ಗಡೆಗೊಂಡ ಸಂಘದ ಸದಸ್ಯರುಗಳ ಮಕ್ಕಳಿಗೆ ನಗದು ಪುರಸ್ಕಾರ ವಿತರಿಸಲಾಗುವುದು. ಮಣಿಪಾಲ ಕೆಎಂಸಿಯ ಮೂಳೆ ತಜ್ಞ ಡಾ.ಬೆಂಜಮಿನ್ ಜೋಸೆಫ್ ಹಾಗೂ ಸಮಾಜ ಸೇವಕ ನಿತ್ಯಾನಂದ ಒಳಕಾಡು ಇವರನ್ನು ಸನ್ಮಾನಿ ಸಲಾಗುವುದು ಎಂದು ಮೋಹನದಾಸ್ ನುಡಿದರು.
ಕೊನೆಯಲ್ಲಿ ಕೇರಳಿಯ ಶೈಲಿಯ ಓಣಂ ಭೋಜನ ‘ಓಣಸದ್ಯ’ ಇರುತ್ತದೆ. ಸಂಘದ ಸದಸ್ಯರಿಂದ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತದೆ ಎಂದೂ ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಕೆ.ವಿ.ಕುಮಾರ್, ಖಜಾಂಚಿ ಪ್ರಸನ್ನರಾಜ್ ಸಿ., ಸುಗುಣ ಕುಮಾರ್, ಪ್ರೊ.ಜೋಸೆಫ್ ಮ್ಯಾಥ್ಯೂ ಅವರು ಉಪಸ್ಥಿತರಿದ್ದರು.