ಸಮ-ಬೆಸ ವಾಹನ ಸಂಚಾರ ನಿಯಮಕ್ಕೆ ಗಡ್ಕರಿ ವಿರೋಧ

Update: 2019-09-13 15:45 GMT

ನಾಗಪುರ,ಸೆ.13: ದಿಲ್ಲಿಯಲ್ಲಿ ನವೆಂಬರ್ 4ರಿಂದ ನವೆಂಬರ್ 15ರವರೆಗೆ ಸಮ -ಬೆಸ ನೋಂದಣಿ ಸಂಖ್ಯೆಯ ವಾಹನಗಳನ್ನು ಪ್ರತ್ಯೇಕವಾಗಿ ಎರಡು ದಿನಗಳಿಗೊಮ್ಮೆ ಸಂಚರಿಸುವಂತೆ ಮಾಡುವ ನಿಯಮವನ್ನು ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಹೇಳಿಕೆಯ ಬೆನ್ನಲ್ಲೇ ಕೇಂದ್ರ ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಹೇಳಿಕೆಯೊಂದನ್ನು ನೀಡಿ, ಅಂತಹ ಕ್ರಮದ ಅಗತ್ಯವಿಲ್ಲವೆಂದು ಅಭಿಪ್ರಾಯಿಸಿದ್ದಾರೆ. ಮಹಾರಾಷ್ಟ್ರದ ನಾಗಪುರದಲ್ಲಿ ಸಾಂಧ್ರೀಕೃತ ನೈಸರ್ಗಿಕ ಅನಿಲ ಮಾರಾಟ ಮಳಿಗೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ‘‘ ಈಗ ದಿಲ್ಲಿಯಲ್ಲಿ ಸಮ-ಬೆಸ ವಾಹನ ಸಂಚಾರ ನಿಯಮದ ಅಗತ್ಯವಿಲ್ಲ. ಯಾಕೆಂದರೆ ನಾವು ನಿರ್ಮಿಸಿರುವ ನೂತನ ವರ್ತುಲ ರಸ್ತೆಯು, ದಿಲ್ಲಿಯಲ್ಲಿ ಮಾಲಿನ್ಯವನ್ನು ಒಂದು ನಿರ್ದಿಷ್ಟ ಹಂತದವರೆಗೆ ಕಡಿಮೆಗೊಳಿಸುವಲ್ಲಿ ನೆರವಾಗಿದೆ. ಇದರ ಜೊತೆಗೆ ನನ್ನ ಸಚಿವಾಲವು 50 ಸಾವಿರ ಕೋಟಿ ರೂ. ಮೊತ್ತದ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಪರಿಸರ ಮಾಲಿನ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಯಮುನಾ ನದಿಯ ಶುದ್ಧೀಕರಣ ಮತ್ತಿತರ ಕಾಮಗಾರಿಗಳು ಕೂಡಾ ನಡೆಯುತ್ತಿವೆ ’’ ಎಂದು ಗಡ್ಕರಿ ತಿಳಿಸಿದರು. ಎರಡು ವರ್ಷಗಳೊಳಗೆ ದಿಲ್ಲಿಯು ಮಾಲಿನ್ಯದಿಂದ ಮುಕ್ತವಾಗಲಿದೆಯೆಂದರು. ನಾಗಪುರದಲ್ಲಿ ಶೀಘ್ರದಲ್ಲೇ ಹಲವಾರು ವಿದ್ಯುತ್ಶಕ್ತಿ ಚಾಲಿತ ಬಸ್ಗಳು ಓಡಾಡಲಿವೆಯೆಂದು ಗಡ್ಕರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News