ಗಿರಿಗಿಟ್ ವಿವಾದ: ಚಿತ್ರದ ಆಕ್ಷೇಪಾರ್ಹ ದೃಶ್ಯ ತೆಗೆಯಲು ಚಿತ್ರ ತಂಡ ಒಪ್ಪಿಗೆ

Update: 2019-09-13 15:53 GMT

ಮಂಗಳೂರು, ಸೆ.13: ಇತ್ತೀಚೆಗೆ ಬಿಡುಗಡೆಯಾದ ಗಿರಿಗಿಟ್  ಹೆಸರಿನ ತುಳು ಚಲನಚಿತ್ರದಲ್ಲಿ ನ್ಯಾಯಾಂಗ ನಿಂದನೆ ಮತ್ತು ವಕೀಲ ಸಮುದಾಯದ ಭಾವನೆಗಳಿಗೆ ಧಕ್ಕೆ ಮಾಡಲಾಗಿದೆ ಎಂಬ ಆಕ್ಷೇಪಗಳನ್ನು ಮಾಡಿ ರುವ ಭಾಗಗಳನ್ನು  ಬೇಷರತ್ತಾಗಿ ತೆಗೆದು ಹಾಕಲು ಗಿರಿಗಿಟ್ ಚಿತ್ರ ತಂಡ ಒಪ್ಪಿಕೊಂಡಿದೆ.

ಮಂಗಳೂರಿನ ಪ್ರಧಾನ ಕಿರಿಯ ಸಿವಿಲ್ ನ್ಯಾಯಾಧೀಶರ ಮುಂದೆ ಚಿತ್ರತಂಡದ ಪರ ವಾದ ಮಂಡಿಸಿದ ಗಿರಿಗಿಟ್ ಪರ ವಕೀಲರು ಚಿತ್ರ ಪ್ರದರ್ಶನ ಮುಂದುವರಿಸಲು ಅನುಮತಿ ಯಾಚಿಸಿದರು. ತಾಂತ್ರಿಕ ಕಾರಣಗಳಿಂದ ಚಿತ್ರ ಪ್ರದರ್ಶನ ಮುಂದುವರಿಯುತ್ತಿದ್ದು, ಚೆನ್ನೈನಲ್ಲಿ ಚಲನಚಿತ್ರದ ಭಾಗಗಳನ್ನು ಸಂಪಾದನೆ(ಎಡಿಟ್) ಮಾಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಸೂಕ್ತ ಸಮಯಾವಕಾಶ ಬೇಕಾಗಿದೆ ಎಂಬುದನ್ನು ನ್ಯಾಯಾಲಯದ ಮುಂದೆ ಅರಿಕೆ ಮಾಡಿಕೊಂಡರು.

ಚಿತ್ರ ತಂಡದ ಪರವಾಗಿ ನಟ-ನಿರ್ದೇಶಕ ರೂಪೇಶ್ ಶೆಟ್ಟಿ ಹಾಜರಿದ್ದರು. ವಾದ-ವಿವಾದಗಳನ್ನು ಆಲಿಸಿದ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದರು.

ಮಂಗಳೂರು ವಕೀಲರ ಸಂಘದ ಪರವಾಗಿ ಹಿರಿಯ ನ್ಯಾಯವಾದಿ ಎಂ.ಪಿ. ಶೆಣೈ ವಾದ ಮಂಡಿಸಿದರು. ತುಳು ಚಿತ್ರೋದ್ಯಮ, ನಟ, ನಿರ್ದೇಶಕರು ಸೇರಿದಂತೆ ಚಿತ್ರ ತಂಡದ ಬಗ್ಗೆ ನಮಗೆ ಯಾವುದೇ ದ್ವೇಷ  ಭಾವನೆ ಇಲ್ಲ. ಸಿನಿಮಾ ರಂಗ ಒಂದು ಜವಾಬ್ದಾರಿಯುತ ಮಾಧ್ಯಮ. ನ್ಯಾಯಾಂಗ ವ್ಯವಸ್ಥೆ ಮತ್ತು ಅದರ ಪ್ರಮುಖ ಭಾಗವಾದ ವಕೀಲ ಸಮುದಾಯದ ಭಾವನೆಗಳಿಗೆ ಗೌರವ ನೀಡಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಕೆಲಸವನ್ನು ಚಿತ್ರ ತಂಡ ಮಾಡುವಂತಾಗಬೇಕು ಎಂದು ವಕೀಲರ ಸಂಘದ ಕಾರ್ಯದರ್ಶಿ ಎಚ್. ವಿ. ರಾಘವೇಂದ್ರ ತಿಳಿಸಿದ್ದಾರೆ.

ಇದಕ್ಕೂ ಮುನ್ನ, ಚಿತ್ರ ತಂಡದ ಪ್ರಮುಖರು ವಕೀಲರ ಸಂಘದ ಜೊತೆ ಮಾತುಕತೆ ನಡೆಸಿ ಚಿತ್ರದ ವಿರುದ್ಧ ಸಲ್ಲಿಸಲಾಗಿರುವ ದಾವೆಯನ್ನು ಕೈಬಿಡುವಂತೆ ಮನವಿ ಮಾಡಿತ್ತು. ವಕೀಲರ ಸಂಘ ವ್ಯಕ್ತಪಡಿಸಿರುವ ಎಲ್ಲ ಆಕ್ಷೇಪಗಳನ್ನು ಸೌಹಾರ್ದಯುತವಾಗಿ ಬಗೆಹರಿಸುವ ಭರವಸೆಯನ್ನು ನೀಡಿತ್ತು ಮತ್ತು ಯಾರ ಭಾವನೆಗಳಿಗಾದರೂ ನೋವಾಗಿದ್ದರೆ ವಿಷಾದವನ್ನು ವ್ಯಕ್ತಪಡಿಸುವುದಾಗಿ ಚಿತ್ರ ತಂಡ ಹೇಳಿಕೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News