ರೈಲ್ವೆ ಅಧಿಕಾರಿಗಳ ಜತೆ ಮಾತುಕತೆ ನಡೆಸಲಿರುವ ಸಿಎಂ : ನಳಿನ್

Update: 2019-09-13 16:09 GMT

ಮಂಗಳೂರು, ಸೆ.13: ಕೇರಳದ ಕಾಞಂಗಾಡ್-ಕರ್ನಾಟಕದ ಕಾಣಿಯೂರು ನಡುವಿನ ಪ್ರಸ್ತಾವಿತ ರೈಲುಮಾರ್ಗದ ಸಮೀಕ್ಷೆ ಕುರಿತಂತೆ ರಾಜ್ಯದ ಮುಖ್ಯಮಂತ್ರಿ ಜೊತೆ ಬೆಂಗಳೂರಿನಲ್ಲಿ ರೈಲ್ವೆ ಅಧಿಕಾರಿಗಳ ಸಭೆ ಶೀಘ್ರ ನಡೆಯಲಿದೆ ಎಂದು ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಮಂಗಳೂರಿನ ಜಿಲ್ಲಾ ಪಂಚಾಯ್ತಿಯ ನೇತ್ರಾವತಿ ಸಭಾಂಗಣದಲ್ಲಿ ಶುಕ್ರವಾರ ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ನಡೆದ ರೈಲ್ವೆ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಈ ಮಾತು ಹೇಳಿದರು.

ಕೇರಳದ ಕಾಞಂಗಾಡ್‌ನಿಂದ ಕರ್ನಾಟಕ ಗಡಿ ಭಾಗದವರೆಗೆ ಕೇರಳದಲ್ಲಿ ಈ ರೈಲುಮಾರ್ಗದ ಸರ್ವೇ ಪೂರ್ಣಗೊಳಿಸಲಾಗಿದೆ. ಆದರೆ ರಾಜ್ಯದ ವ್ಯಾಪ್ತಿಯಲ್ಲಿ ಗಡಿ ಭಾಗದಿಂದ ಕಾಣಿಯೂರುವರೆಗೆ ಸರ್ವೇ ಕಾರ್ಯಕ್ಕೆ ಅರಣ್ಯ ಪ್ರದೇಶ ಅಡ್ಡಿಯಾಗಿದೆ. ಈ ವಿಚಾರವನ್ನು ಮುಖ್ಯಮಂತ್ರಿ ಗಳ ಗಮನಕ್ಕೆ ತಂದಿದ್ದು, ರೈಲ್ವೆ ಅಧಿಕಾರಿಗಳ ಸಭೆ ನಡೆಸುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದರು.

ಫಾಲ್ಘಾಟ್ ವಿಭಾಗೀಯ ಅಧಿಕಾರಿ ಪ್ರತಾಪ್‌ಸಿಂಗ್ ಶಮಿ ಮಾತನಾಡಿ, ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಬಹುನಿರೀಕ್ಷಿತ 4 ಮತ್ತು 5ನೇ ಫ್ಲಾಟ್ ಫಾರಂ ನಿರ್ಮಾಣ ಮತ್ತೆ ವಿಳಂಬವಾಗಲಿದೆ. ಇಲ್ಲಿರುವ ಪಿಟ್‌ಲೈನ್‌ನ್ನು ಸ್ಥಳಾಂತರಿಸಬೇಕಾದ ಹಿನ್ನೆಲೆಯಲ್ಲಿ ಫ್ಲಾಟ್‌ಫಾರಂ ಕಾಮಗಾರಿ ಮುಂದಿನ ಮಾರ್ಚ್ ವೇಳೆಗೆ ಆರಂಭವಾಗುವ ನಿರೀಕ್ಷೆ ಇದೆ ಎಂದು ಹೇಳಿದರು.

ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಹೊಸ ಟಿಕೆಟ್ ಕೌಂಟರ್ ತೆರೆಯಬೇಕು ಎಂಬ ಬೇಡಿಕೆಯ ಬಗ್ಗೆ ಉತ್ತರಿಸಿದ ಪ್ರತಾಪ್‌ಸಿಂಗ್ ಶಮಿ, ಈಗಾಗಲೇ ರೈಲು ಟಿಕೆಟ್‌ಗಳನ್ನು ಮೊಬೈಲ್‌ನಲ್ಲಿ ಆನ್‌ಲೈನ್ ಮೂಲಕ ಕಾಯ್ದಿರಿಸುವ ಸೌಲಭ್ಯಕ್ಕೆ ಉತ್ತೇಜನ ನೀಡಲಾಗುತ್ತಿದೆ. ಟಿಕೆಟ್ ಕೌಂಟರ್‌ಗಳನ್ನು ಹಂತ ಹಂತವಾಗಿ ಮುಚ್ಚಲಾಗುತ್ತಿದೆ. ಭವಿಷ್ಯದಲ್ಲಿ ಇ-ಟಿಕೆಟ್ ಪರಿಪೂರ್ಣವಾಗಿ ಚಾಲನೆ ಬರಲಿದೆ ಎಂದು ಅವರು ಹೇಳಿದರು.

ಸಂಸದ ನಳಿನ್ ಕುಮಾರ್ ಮಾತನಾಡಿ, ಪುತ್ತೂರು ಎಪಿಎಂಸಿ ಬಳಿ ರೈಲ್ವೆ ಕೆಳಸೇತುವೆ ರಚನೆಗೆ 12.70 ಕೋಟಿ ರೂ. ಪ್ರಸ್ತಾವ ಸಲ್ಲಿಸಲಾಗಿದೆ. ಇದಕ್ಕೆ ಶೇ.50ರಷ್ಟು ಮೊತ್ತವನ್ನು ರೈಲ್ವೆ ಇಲಾಖೆ ಭರಿಸಲಿದ್ದು, ಉಳಿದ ಮೊತ್ತವನ್ನು ಎಪಿಎಂಸಿ, ಸ್ಥಳೀಯಾಡಳಿತ ಹಾಗೂ ಜನಪ್ರತಿನಿಧಿಗಳ ನಿಧಿಯಿಂದ ಭರಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಅಡ್ಯಾರ್‌ನಲ್ಲಿ ಭೂಕುಸಿತದ ಭೀತಿ ಇದ್ದು, ರೈಲ್ವೆ ಇಲಾಖೆಯ ಜಾಗ ಒತ್ತುವರಿಯಾಗಿದೆ. ಅಲ್ಲಿ ಪುದು ಪಂಚಾಯತ್‌ನ ತ್ಯಾಜ್ಯ ಹಾಕುತ್ತಿದ್ದಾರೆ. ಅದನ್ನು ತೆರವುಗೊಳಿಸಿ, ಭೂಕುಸಿತ ತಡೆಗೆ ತಡೆಗೋಡೆ ನಿರ್ಮಿಸುವಂತೆ ಸ್ಥಳೀಯರು ಗಮನ ಸೆಳೆದರು. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸುವಂತೆ ಮೈಸೂರು ವಿಭಾಗೀಯ ಅಧಿಕಾರಿ ಅಪರ್ಣಾ ಗಾರ್ಗ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಸ್ಕ್ಯಾನರ್ ಮೆಶಿನ್ ಬಳಕೆ: ಅಧ್ಯಯನ’

ಮಂಗಳೂರು ಸೆಂಟ್ರಲ್ ಮತ್ತು ಜಂಕ್ಷನ್ ನಿಲ್ದಾಣದಲ್ಲಿ ಸ್ಕ್ಯಾನರ್ ಮೆಶಿನ್ ಬಳಕೆ ಮಾಡುವಂತೆ ರೈಲ್ವೆ ಹೋರಾಟಗಾರ ಹನುಮಂತ ಕಾಮತ್ ಆಗ್ರಹಿಸಿದರು. ಅಲ್ಲದೆ, ಪಾಂಡೇಶ್ವರದಲ್ಲಿರುವ ಗೂಡ್ ಶೆಡ್‌ನ್ನು ಉಳ್ಳಾಲಕ್ಕೆ ಸ್ಥಳಾಂತರಿಸುವಂತೆ ಆಗ್ರಹಿಸಿದರು. ಈ ಬಗ್ಗೆ ಅಧ್ಯಯನ ನಡೆಸುವುದಾಗಿ ವಿಭಾಗೀಯ ಅಧಿಕಾರಿ ಪ್ರತಾಪ್‌ಸಿಂಗ್ ಶಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News