ಬಿಳಿ ಬಾವುಟ ಬೀಸುತ್ತಾ ತಮ್ಮ ಸೈನಿಕರ ಮೃತದೇಹ ಕೊಂಡೊಯ್ದ ಪಾಕ್ ಸೇನೆ

Update: 2019-09-14 10:03 GMT

ಹೊಸದಿಲ್ಲಿ, ಸೆ.14: ಭಾರತೀಯ ಸೇನೆಯ ಗುಂಡಿನಿಂದ ಸಾವನ್ನಪ್ಪಿದ ತಮ್ಮ ಇಬ್ಬರು ಸಹೋದ್ಯೋಗಿಗಳ ಮೃತದೇಹಗಳನ್ನು ಪಾಕ್ ಸೈನಿಕರು ಬಿಳಿ ಧ್ವಜವೊಂದನ್ನು ಬೀಸುತ್ತಾ ಗಡಿ ನಿಯಂತ್ರಣ ರೇಖೆ ಸಮೀಪ ಬಂದು ಕೊಂಡೊಯ್ದಿದ್ದಾರೆ. ಈ ಕುರಿತಾದ ಫೋಟೊಗಳು ವೈರಲ್ ಆಗಿದೆ.

ಪಾಕ್ ಆಕ್ರಮಿತ ಕಾಶ್ಮೀರದ ಹಾಜಿಪುರ್ ಸೆಕ್ಟರ್ ‍ನಲ್ಲಿನ ಬೆಟ್ಟದ ತಪ್ಪಲಿನಲ್ಲಿದ್ದ ಇಬ್ಬರು ಸೈನಿಕರ ಮೃತದೇಹಗಳನ್ನು ಪಾಕ್ ಸೈನಿಕರು ಕೊಂಡೊಯ್ದಿದ್ದಾರೆ.

ಸೆಪ್ಟೆಂಬರ್ 10ರಂದು ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದ ಬಳಿಕ ಭಾರತೀಯ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ ಪಾಕ್ ಸೈನಿಕ ಗುಲಾಮ್ ರಸೂಲ್ ಸಾವನ್ನಪ್ಪಿದ್ದ. ನಂತರ ಆತನ ಮೃತದೇಹವನ್ನು ವಾಪಸ್ ಪಡೆಯಲು ಪಾಕ್ ಸೇನೆ ಗುಂಡಿನ ಮಳೆಗರೆದಿದ್ದರೂ ಈ ಸಂದರ್ಭ ಭಾರತ ನಡೆಸಿದ ಪ್ರತಿ ದಾಳಿಯಲ್ಲಿ ಅವರ ಇನ್ನೊಬ್ಬ ಸೈನಿಕ ಹತನಾಗಿದ್ದ. ಇದಾದ ಎರಡು ದಿನಗಳ ಕಾಲ ಪಾಕ್ ಕಡೆಯಿಂದ ಯಾವುದೇ ಗುಂಡಿನ ದಾಳಿ ನಡೆದಿರಲಿಲ್ಲ. ಆದರೆ ಶುಕ್ರವಾರ ಮೂರ್ನಾಲ್ಕು ಪಾಕ್ ಸೈನಿಕರು ಕೈಯ್ಯಲ್ಲಿ ಬಿಳಿ ಧ್ವಜವನ್ನು ಬೀಸುತ್ತಾ ಬಂದು ನಂತರ ಮೃತದೇಹಗಳನ್ನು ಕೊಂಡೊಯ್ದಿದ್ದಾರೆ.

ಜುಲೈ 30, 31ರಂದು ಕೇರನ್ ಸೆಕ್ಟರ್ ಪ್ರದೇಶದಲ್ಲಿ  ಸುಮಾರು ಏಳು ಸೈನಿಕರು ಹಾಗೂ ಉಗ್ರರನ್ನು ಭಾರತೀಯ ಸೇನೆ ಹತ್ಯೆಗೈದಿದ್ದರೂ ಅವರ ಮೃತದೇಹಗಳನ್ನು ಕೊಂಡೊಯ್ಯಲು ಪಾಕಿಸ್ತಾನ ಯಾವುದೇ ಪ್ರಯತ್ನ ನಡೆಸಿರಲಿಲ್ಲ. 1999ರ ಕಾರ್ಗಿಲ್ ಯುದ್ಧದಲ್ಲಿ ಹತರಾದ ಪಾಕ್ ಸೈನಿಕರ ಮೃತದೇಹಗಳ ಅಂತ್ಯಕ್ರಿಯೆಗಳನ್ನು ಭಾರತೀಯ ಸೈನಿಕರೇ ನೆರವೇರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News