ಸ್ಪಷ್ಟವಾಗದ ನಿಯಂತ್ರಣ ರೇಖೆ ಗಡಿವಿವಾದಗಳಿಗೆ ಕಾರಣ: ಲಡಾಖ್ ಸಂಸದ

Update: 2019-09-14 14:20 GMT

ಲೇಹ್,ಸೆ.14: ಗಡಿ ಘರ್ಷಣೆಗಳನ್ನು ನಿವಾರಿಸಲು ಭಾರತ ಮತ್ತು ಚೀನಾ ಮಾತುಕತೆಗಳನ್ನು ನಡೆಸಿ ನಿಯಂತ್ರಣ ರೇಖೆಯನ್ನು ಸೂಕ್ತವಾಗಿ ಸ್ಪಷ್ಟೀಕರಿಸಬೇಕು ಎಂದು ಲಡಾಖ್‌ನ ಬಿಜೆಪಿ ಸಂಸದ ಜಾಮ್ಯಾಂಗ್ ತ್ಸೆರಿಂಗ್ ನಾಮಗ್ಯಾಲ್ ಅವರು ಹೇಳಿದ್ದಾರೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು,ಈ ವಾರ ಗಡಿಯಲ್ಲಿ ಉಂಟಾಗಿದ್ದ ಉದ್ವಿಗ್ನತೆ ಗಂಭೀರವೇನಲ್ಲ ಮತ್ತು ಇಂತಹ ಬೆಳವಣಿಗೆಗಳ ಬಗ್ಗೆ ನಾವು ಅತಿಯಾಗಿ ತಲೆ ಕೆಡಿಸಿಕೊಳ್ಳಬೇಕಿಲ್ಲ ಎಂದು ಹೇಳಿದರು.

ಗಡಿಯನ್ನು ಸ್ಪಷ್ಟವಾಗಿ ಗುರುತಿಸಲಾಗಿಲ್ಲ ಎನ್ನುವುದು ನಿಜವಾದ ಸಮಸ್ಯೆ ಮತ್ತು ಇದರಿಂದಾಗಿ ಚೀನಾ ಒಂದನ್ನು ಗ್ರಹಿಸಿದರೆ ನಾವು ಬೇರೊಂದನ್ನು ಗ್ರಹಿಸುತ್ತೇವೆ. ವಾಸ್ತವಿಕ ನಿಯಂತ್ರಣ ರೇಖೆಯನ್ನು ನಿಗದಿಗೊಳಿಸಲಾಗಿಲ್ಲ ಮತ್ತು ಸೂಕ್ತವಾಗಿ ಗುರುತಿಸಿಲ್ಲ,ಇದೇ ಕಾರಣದಿಂದ ಇಂತಹ ತೊಂದರೆಗಳು ಪುನರಾವರ್ತನೆಗೊಳ್ಳುತ್ತಿರುತ್ತವೆ ಎಂದ ಅವರು,ಜಾನುವಾರುಗಳು ಗಡಿಯನ್ನು ದಾಟುತ್ತಿರುತ್ತವೆ ಮತ್ತು ಸ್ಥಳೀಯ ಮಟ್ಟದಲ್ಲಿ ಕೊಂಚ ಉದ್ವಿಗ್ನತೆಗೆ ಕಾರಣವಾಗುತ್ತವೆ ಎಂದರು. 2014ರಲ್ಲಿ ನರೇಂದ್ರ ಮೋದಿ ಸರಕಾರವು ಅಧಿಕಾರಕ್ಕೆ ಬಂದ ನಂತರ ಚೀನಾಕ್ಕೆ ಯಾವುದೇ ಭೂಮಿಯ ಮೇಲೆ ಹಕ್ಕು ಮಂಡಿಸಲು ಸಾಧ್ಯವಾಗಿಲ್ಲ ಎಂದು ನಾಮಗ್ಯಾಲ್ ಹೇಳಿದರು.

ನೂತನ ಕೇಂದ್ರಾಡಳಿತ ಪ್ರದೇಶ ಸ್ಥಾನಮಾನದಿಂದ ಲಡಾಖಿಗಳು ಹರ್ಷಗೊಂಡಿದ್ದಾರೆ ಎಂದ ಅವರು, ಅಸಮಾಧಾನವನ್ನು ವ್ಯಕ್ತಪಡಿಸಿ ಕೆಲವು ಪೋಸ್ಟರ್‌ಗಳು ಕಾಣಿಸಿಕೊಂಡಿವೆ ಎನ್ನುವುದನ್ನು ನಿರಾಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News