ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಸುವರ್ಣ ಮಹೋತ್ಸವ

Update: 2019-09-14 16:54 GMT

ಮಂಗಳೂರು, ಸೆ.14: ನಗರದ ಕದ್ರಿ ಉದ್ಯಾನವನದ ಬಳಿಯ ಶ್ರೀ ಗೋರಕ್ಷನಾಥ ಜ್ಞಾನ ಮಂದಿರದಲ್ಲಿ ಶನಿವಾರ ನಡೆದ ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಸುವರ್ಣ ಮಹೋತ್ಸವಕ್ಕೆ ಕದ್ರಿಯ ಕದಳಿ ಶ್ರೀ ಯೋಗೇಶ್ವರ (ಜೋಗಿ ಮಠ) ಮಠದ ಪೀಠಾಧಿಪತಿ ಶ್ರೀ ರಾಜಾಯೋಗಿ ನಿರ್ಮಲ್‌ನಾಥ್ ಜೀ ಮಹಾರಾಜ್ ಚಾಲನೆ ನೀಡಿದರು.

ಬಳಿಕ ಆಶೀರ್ವಚನ ನೀಡಿದ ಸ್ವಾಮೀಜಿ, ಸಂಘಟನೆಯಿಂದ ಸಮಾಜಕ್ಕೆ ಶಕ್ತಿ ಸಂಚಯನವಾಗುತ್ತದೆ. ನಾಥ ಪಂಥದ ಗುರು ಪರಂಪರೆಯಲ್ಲಿ ಬೆಳೆದು ಬಂದ ಜೋಗಿ ಸಮಾಜವು ಇಂದು ಸಂಘದ ಮೂಲಕ ಸಂಘಟಿತವಾಗಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದೆ. ಸಂಘದ ಸಮಾಜಮುಖಿ ಚುಟುವಟಿಕೆಗಳು ಶ್ಲಾಘನೀಯ ಎಂದು ಹೇಳಿದರು.

ಮುಖ್ಯಅತಿಥಿಯಾಗಿದ್ದ ಪ್ರಾಥಮಿಕ ಶಿಕ್ಷಣ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಆನಂದ ಕೆ. ಮಾತನಾಡಿ, ಇಂದು ಜೋಗಿ ಸಮಾಜ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಪ್ರಾಧಾನ್ಯತೆ ಬಂದಿದೆ. ಇದಕ್ಕೆ ಜೋಗಿ ಸಂಘದ ಹಿರಿಯರು ಕಾರಣ. ಅಂದು ಅವರು ಮಾಡಿದ ತ್ಯಾಗದ ಲ ಇದು. ಮುಂದೆ ಜೋಗಿ ಸಮಾಜವು ಗುಣಾತ್ಮಕವಾಗಿ ಬೆಳೆಯಬೇಕು ಎಂದರು.

ಅತಿಥಿಯಾಗಿದ್ದ ಕೇರಳ ಸಹಕಾರಿ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಐತಪ್ಪ ಮವ್ವಾರು, ಜೋಗಿ ಸಮಾಜದಲ್ಲಿ ಹುಟ್ಟಿದ ನಾನು ಇಂದು ನಾನೊಬ್ಬ ಜೋಗಿ ಎಂದು ಹೆಮ್ಮೆಯಿಂದ ಹೇಳುವಂತಹ ಸ್ಥಿತಿಯಲ್ಲಿ ಜೋಗಿ ಸಮಾಜ ಅಭ್ಯುದಯ ಕಂಡಿದೆ. ಮುಂದೆಯೂ ಹಿರಿಯರ ಮಾರ್ಗದರ್ಶನದಲ್ಲಿ ಸಂಘಟನಾತ್ಮಕವಾಗಿ ಬೆಳೆದು ಮುನ್ನಡೆಯಬೇಕು ಎಂದು ಆಶಿಸಿದರು.

ಅಧ್ಯಕ್ಷತೆ ವಹಿಸಿದ್ದ ಉಡುಪಿ ಪೊಲೀಸ್ ನಿರೀಕ್ಷಕ ನವೀನಚಂದ್ರ ಜೋಗಿ, ನಗರ ಪ್ರದೇಶಗಳಲ್ಲಿರುವ ಜೋಗಿ ಸಮಾಜದ ಮಂದಿ ಉನ್ನತಿಯಾಗಿದ್ದಾರೆ. ಆದರೆ ಗ್ರಾಮೀಣ ಭಾಗದಲ್ಲಿ ಪರಿಸ್ಥಿತಿ ಸುಧಾರಿಸಿಲ್ಲ. ಹೊಂದಾಣಿಕೆ ಕೊರತೆಯಿಂದ ಈಗಲೂ ಗ್ರಾಮೀಣ ಪ್ರದೇಶದ ಜೋಗಿ ಬಾಂಧವರು ಬಡತನ, ಅನಕ್ಷರತೆ, ಸಾಮಾಜಿಕ ನ್ಯಾಯದಿಂದ ವಂಚಿತರಾಗಿದ್ದಾರೆ. ಬದುಕಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಜೋಗಿ ಬಂಧುಗಳು ಕೂಡಾ ಆರ್ಥಿಕವಾಗಿ, ಶೈಕ್ಷಣಿಕವಾಗಿ ಬೆಳೆಯಬೇಕು ಎಂದರು.

ನಾವು ಇಂದು ಸಂಘಟಿತರಾಗಿದ್ದರೂ ನಮ್ಮ ಸಮಾಜಕ್ಕೆ ಸಿಗಬೇಕಾದ ಅವಕಾಶ, ಸೌಲಭ್ಯಗಳು ಸಿಗುತ್ತಿಲ್ಲ. ಮುಖ್ಯವಾಗಿ ರಾಜಕೀಯ ಪ್ರಾತಿನಿಧ್ಯ ಸಿಗಬೇಕಿದೆ. ಈ ದಿಸೆಯಲ್ಲಿ ಜೋಗಿ ಸಮಾಜದ ಎಲ್ಲರೂ ಒಗ್ಗೂಡಿ, ಸಂಘಟಿತರಾಗಬೇಕು. ನಾಥ ಪಂಥದ ಭಾಗವಾಗಿರುವ ಜೋಗಿ ಬಂಧುಗಳು ತಮ್ಮ ಸಮಾಜದ ಆಚಾರ ವಿಚಾರಗಳನ್ನು ತಿಳಿಯಬೇಕೆಂದು ಹೇಳಿದರು.

ಕರ್ನಾಟಕ ಜೋಗಿ ಸಮಾಜದ ಸುಧಾರಕ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಜೋಗಿ, ಮಾಜಿ ಅಧ್ಯಕ್ಷರಾದ ಎಂ. ರಾಮಚಂದ್ರ, ಡಾ. ಪಿ. ಕೇಶವನಾಥ್, ಸಂಘದ ಪ್ರಧಾನ ಕಾರ್ಯದರ್ಶಿ ಬಿ. ಗಂಗಾಧರ್, ಜೋಗಿ ಮಹಿಳಾ ಘಟಕದ ಅಧ್ಯಕ್ಷೆ ಅಮಿತಾ ಸಂಜೀವ್ ಉಪಸ್ಥಿತರಿದ್ದರು.

ಸುವರ್ಣ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಎಚ್. ಕೆ. ಪುರುಷೋತ್ತಮ ಸ್ವಾಗತಿಸಿ, ಸಂಘ ಬೆಳೆದು ಬಂದ ಹಾದಿ ವಿವರಿಸಿದರು. ಜೋಗಿ ಯುವ ಘಟಕದ ಪ್ರಧಾನ ಕಾರ್ಯದರ್ಶಿ ದೀಕ್ಷಿತ್ ಜೋಗಿ ವಂದಿಸಿದರು. ಪ್ರಭಾಕರ ಜೋಗಿ ಕಾರ್ಯಕ್ರಮ ನಿರ್ವಹಿಸಿದರು.

ಜೋಗಿ ಸೇವಾ ವಿಭೂಷಣ ಪ್ರಶಸ್ತಿ ಪ್ರದಾನ

ಜೋಗಿ ಸಮಾಜದ ಹಿರಿಯ ಸೇವಾನಿರತ ಹುಬ್ಬಳ್ಳಿಯ ಖ್ಯಾತ ಉದ್ಯಮಿ ವೈ.ಡಿ. ಮಧೂರ್‌ಕರ್ ಅವರಿಗೆ ನೀಡಲಾದ ‘ಜೋಗಿ ಸೇವಾ ವಿಭೂಷಣ’ ಪ್ರಶಸ್ತಿಯನ್ನು ಅವರ ಪರವಾಗಿ ಸಹೋದರ ಶಿವಾಜಿ ಡಿ. ಮಧೂರ್‌ಕರ್ ಸ್ವೀಕರಿಸಿದರು. ಜೋಗಿ ಸಂಘಕ್ಕೆ ಅಡಿಪಾಯ ಹಾಕಿದ ಶಿಕ್ಷಣ ತಜ್ಞ ದಿ. ವೈ. ಗೋಪಾಲ್ ಅವರನ್ನು ಸ್ಮರಿಸಲಾಯಿತು. ಗೋಪಾಲ್ ಕುಟುಂಬಿಕರನ್ನು ಸ್ವಾಮೀಜಿ ಗೌರವಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News