ಮಂಗಳೂರು: ಪಶ್ಚಿಮ ಬಂಗಾಳ ಪೊಲೀಸ್ ಕ್ರೌರ್ಯ ಖಂಡಿಸಿ ಡಿವೈಎಫ್‌ಐ ಪ್ರತಿಭಟನೆ

Update: 2019-09-14 17:36 GMT

ಮಂಗಳೂರು, ಸೆ.14: ಉದ್ಯೋಗದ ಹಕ್ಕಿಗಾಗಿ ನಿರುದ್ಯೋಗದ ವಿರುದ್ಧ ಪಶ್ಚಿಮ ಬಂಗಾಳದ ಸಿಂಗೂರಿನಲ್ಲಿ ನಡೆಯುತ್ತಿದ್ದ ಯುವಜನ ವಿದ್ಯಾರ್ಥಿ ಹೋರಾಟದ ಮೇಲೆ ಲಾಠಿ ಪ್ರಹಾರ ನಡೆಸಿದ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರಕಾರದ ಕ್ರಮವನ್ನು ಖಂಡಿಸಿ ಡಿವೈಎಫ್‌ಐ ಶನಿವಾರ ಸಂಜೆ ಪ್ರತಿಭಟನೆ ನಡೆಸಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ದೇಶದ ಯುವಜನತೆ ನಿರುದ್ಯೋಗ ದಿಂದ ತತ್ತರಿಸಿದ್ದಾರೆ. ನಿರುದ್ಯೋಗದ ವಿರುದ್ಧ ದೇಶದಾದ್ಯಂತ ಚಳವಳಿಗಳು ಭುಗಿಲೇಳುತ್ತಿವೆ ಎಂದರು.

ಚಳವಳಿಯ ಭಾಗವಾಗಿ ಪ.ಬಂಗಾಳ ರಾಜ್ಯದಲ್ಲೂ ಡಿವೈಎಫ್‌ಐ, ಎಸ್‌ಎಫ್‌ಐ ಮತ್ತು ಇತರ ಜನಪರ ಯುವಜನ ವಿದ್ಯಾರ್ಥಿ ಸಂಘಟನೆಗಳು ಪಶ್ಚಿಮ ಬಂಗಾಳ ರಾಜ್ಯ ಹೋರಾಟಕ್ಕೆ ಕರೆ ನೀಡಿದ್ದು ರಾಜ್ಯದಾದ್ಯಂತ ಹೋರಾಟ ನಡೆದಿತ್ತು. ಈ ಭಾಗವಾಗಿ ನಡೆದಿದ್ದ ಸಿಂಗೂರಿನ ಬೃಹತ್ ಯುವಜನ ಹೋರಾಟವನ್ನು ಸಹಿಸಲಾಗದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರಕಾರ ಹೋರಾಟವನ್ನು ಹತ್ತಿಕ್ಕಲು ಹೋರಾಟಗಾರರ ಮೇಲೆ ಅಮಾನುಷವಾಗಿ ಲಾಠಿಪ್ರಹಾರ ನಡೆಸಿದೆ. ಡಿವೈಎಫ್‌ಐ ಜಿಲ್ಲಾ ಸಮಿತಿ ಖಂಡಿಸುತ್ತದೆ ಎಂದರು.

ಡಿವೈಎಫ್‌ಐ ಮಂಗಳೂರು ನಗರ ಉಪಾಧ್ಯಕ್ಷ ಶ್ರೀನಾಥ್ ಕಾಟಿಪಳ್ಳ ಮಾತನಾಡಿ, ಲಾಠಿಪ್ರಹಾರಗಳಿಂದ ಜನಪರ ಹೋರಾಟ ಗಳನ್ನು ಹತ್ತಿಕ್ಕಲಾಗದು. ಇದು ನಿರುದ್ಯೋಗದ ವಿರುದ್ಧದ ಮೊದಲ ಹೋರಾಟ. ಇದು ಇನ್ನಷ್ಟು ತೀವ್ರಗೊಳ್ಳಲಿದೆ ಎಂದರು.

ಪ್ರತಿಭಟನೆಯಲ್ಲಿ ಡಿವೈಎಫ್‌ಐ ಜಿಲ್ಲಾ ಖಜಾಂಚಿ ಮನೋಜ್ ವಾಮಂಜೂರು, ಜಿಲ್ಲಾ ಮುಖಂಡರಾದ ನಿತಿನ್ ಕುತ್ತಾರ್, ಸುನಿಲ್ ತೆವುಲ, ರಫೀಕ್ ಹರೇಕಳ, ನೌಶಾದ್ ಬೆಂಗರೆ, ಹನೀಫ್ ಬೆಂಗರೆ ಮತ್ತು ಡಿವೈಎಫ್‌ಐನ ಮಾಜಿ ಮುಖಂಡರಾದ ಸುನಿಲ್‌ ಕುಮಾರ್ ಬಜಾಲ್, ಯೋಗೀಶ್ ಜಪ್ಪಿನಮೊಗರು, ಕೃಷ್ಣಪ್ಪ ಕೊಂಚಾಡಿ ಉಪಸ್ಥಿತರಿದ್ದರು. ನಗರ ಅಧ್ಯಕ್ಷ ನವೀನ್ ಕೊಂಚಾಡಿ, ಕಾರ್ಯದರ್ಶಿ ಸಾಧಿಕ್ ಕಣ್ಣೂರು, ಚರಣ್ ಪಂಜಿಮೊಗರು ಬಶೀರ್ ಪಂಜಿಮೊಗರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News