ಈ ಸಿಎಂ ಮನೆಯ ನಾಯಿ ಸತ್ತಿದ್ದಕ್ಕೆ ಪಶುವೈದ್ಯನ ಮೇಲೆ ಕೇಸ್ !

Update: 2019-09-15 03:47 GMT

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಮನೆಯ ನಾಯಿ ಸತ್ತ ಸಂಬಂಧ ಅದಕ್ಕೆ ಚಿಕಿತ್ಸೆ ನೀಡಿದ ಪಶುವೈದ್ಯನ ಮೇಲೆ ಅಪರಾಧಾತ್ಮಕ ನಿರ್ಲಕ್ಷ್ಯ ವಹಿಸಿದ ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸಿಎಂ ಕ್ರಮವನ್ನು "ಕ್ರೂರ ವ್ಯಂಗ್ಯ" ಎಂದು ಟೀಕಿಸಲಾಗಿದೆ.

ಈ ಪಶುವೈದ್ಯ ಬುಧವಾರ ಚುಚ್ಚುಮದ್ದು ನೀಡಿದ ಬಳಿಕ ಹನ್ನೊಂದು ತಿಂಗಳ 'ಹಸ್ಕಿ' ಎಂಬ ನಾಯಿಮರಿ ಮೃತಪಟ್ಟಿದೆ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿ ನಿವಾಸದಲ್ಲಿ ಸಾಕು ನಾಯಿಗಳ ಹೊಣೆ ಹೊತ್ತಿರುವ ಆಸೀಫ್ ಅಲಿ ಖಾನ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ. ಚಿಕಿತ್ಸೆಯ ಹೊಣೆ ಹೊತ್ತಿದ್ದ ವೈದ್ಯನ ನಿರ್ಲಕ್ಷ್ಯದಿಂದಾಗಿ ನಾಯಿ ಸಾವಿಗೀಡಾಗಿದೆ ಎಂದು ದೂರಲಾಗಿದೆ.

"ಕೆಸಿಆರ್ ಸರ್ಕಾರದ ಅಪರಾಧಾತ್ಮಕ ನಿರ್ಲಕ್ಷ್ಯದಿಂದಾಗಿ ತೆಲಂಗಾಣದಲ್ಲಿ ಮುಂದುವರಿದಿರುವ ಡೆಂಗ್ ಸಾವಿನ ಸರಣಿಯ ಕ್ರೂರ ಹಾಸ್ಯಚಟಾಕಿ ಇದಾಗಿದೆ" ಎಂದು ಬಿಜೆಪಿ ವಕ್ತಾರ ಕೃಷ್ಣಸಾಗರ್ ಟೀಕಿಸಿದ್ದಾರೆ.

"ಮುಖ್ಯಮಂತ್ರಿಗೆ ನಾಯಿ ಮೇಲೆ ಇರುವ ಪ್ರೀತಿಯ ಅರ್ಧದಷ್ಟು ಜನರ ಬಗ್ಗೆ ಇದ್ದಿದ್ದರೆ ಬಡಮಕ್ಕಳು ಡೆಂಗ್‌ನಿಂದ ಸಾಯುತ್ತಿರಲಿಲ್ಲ" ಎಂದೂ ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಕಳೆದ ಕೆಲ ವಾರಗಳಲ್ಲಿ 3 ಸಾವಿರಕ್ಕೂ ಹೆಚ್ಚು ಡೆಂಗ್ ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ಸಾವು ನೋವು ಕೂಡಾ ಸಂಭವಿಸಿವೆ. ಆದರೆ ಸರ್ಕಾರ ಇದನ್ನು ನಿರಾಕರಿಸಿದೆ. ಸರ್ಕಾರ ನೇಮಿಸಿದ ಸಮಿತಿ ಇದನ್ನು ಡೆಂಗ್ ಜ್ವರದಿಂದಾದ ಸಾವು ಎಂದು ದೃಢೀಕರಿಸುವವರೆಗೂ, ಇದನ್ನು ಡೆಂಗ್ ಸಾವು ಎಂದು ಪರಿಗಣಿಸಲಾಗದು ಎಂದು ಆರೋಗ್ಯ ಸಚಿವ ಎತೆಲಾ ರಾಜೀಂದರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News