1978ರಲ್ಲಿ ಮೇಕೆ ಕದ್ದ ವ್ಯಕ್ತಿಯನ್ನು 41 ವರ್ಷಗಳ ಬಳಿಕ ಬಂಧಿಸಿದ ಪೊಲೀಸರು!

Update: 2019-09-15 08:39 GMT

ಅಗರ್ತಲ, ಸೆ.15: ನಲುವತ್ತೊಂದು ವರ್ಷಗಳ ಹಿಂದೆ ಮೇಕೆ ಕದ್ದ ಆರೋಪದಲ್ಲಿ 58 ವರ್ಷದ ವ್ಯಕ್ತಿಯೊಬ್ಬನನ್ನು ತ್ರಿಪುರಾ ಪೊಲೀಸರು ಬಂಧಿಸಿದ್ದಾರೆ. ಇದಕ್ಕೂ ಮುನ್ನ ಇದೇ ಆರೋಪದಲ್ಲಿ ಹಿಂದೆ ಈತನನ್ನು ಬಂಧಿಸಲಾಗಿತ್ತು. ಬಚು ಕೌಲ್ ಎಂಬ ಆರೋಪಿಗೆ ಅಕ್ಟೋಬರ್ 3ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಆರೋಪಿ ಚಹಾ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಅಗರ್ತಲ ಬಳಿಯ ಮೇಘಲಿಪಾರಾ ಚಹಾತೋಟದಿಂದ ಆತನನ್ನು ಶನಿವಾರ ಬಂಧಿಸಲಾಗಿದೆ.

ಆರೋಪಿ ಬಚು ತನ್ನ ತಂದೆ ಮೋಹನ್ ಕೌಲ್ ಎಮಬಾತನ ಜತೆ ಸೇರಿ 1978ರಲ್ಲಿ ತಾನು ಕೆಲಸ ಮಾಡುತ್ತಿದ್ದ ಕುಮುದ್ ರಂಜನ್ ಭೌಮಿಕ್ ಎಂಬುವವರ ಮನೆಯಿಂದ ಮೇಕೆ ಕದ್ದಿದ್ದ ಎಂದು ಪೊಲೀಸರು ಹೇಳಿದ್ದಾರೆ. ಈ ಮೇಕೆಯನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಯತ್ನಿಸಿದಾಗ ತಂದೆ- ಮಗನನ್ನು ಬಂಧಿಸಲಾಗಿತ್ತು. ಜಾಮೀನಿನ ಮೇಲೆ ಬಿಡುಗಡೆಯಾದ ಅವರು ಬಳಿಕ ತಲೆ ಮರೆಸಿಕೊಂಡಿದ್ದರು ಎಂದು ವಿವರಿಸಿದ್ದಾರೆ.

"ಇದೀಗ 83 ವರ್ಷ ವಯಸ್ಸಿನ ಕುಮುದ್ ರಂಜನ್ ಅವರಿಂದ ಈ ಘಟನೆ ತಿಳಿದುಬಂದಿದೆ. ಅದರಾಣಿ ಚಹಾ ತೋಟದಲ್ಲಿ ಮೋಹನ್ ಕೌಲ್ ಸುಮಾರು 20 ವರ್ಷ ಹಿಂದೆ ಮೃತಪಟ್ಟಿದ್ದಾನೆ. ಆತನ ನಿಕಟ ಸಂಬಂಧಿಗಳು ಮೇಘಲಿಪಾರ ಚಹಾ ತೋಟದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ದೊರಕಿತ್ತು. ಅಲ್ಲಿ ಪರಿಶೀಲನೆ ಮಾಡಿದಾಗ ಆತ ಪತ್ತೆಯಾಗಿದ್ದು, ಆತನನ್ನು ಬಂಧಿಸಲಾಗಿದೆ” ಎಂದು ಠಾಣಾಧಿಕಾರಿ ಚುಕಾಂತ ಸೇನ್ ಚೌಧರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News