ನಿಟ್ಟೂರು: 60 ಅಧಿಕ ಹಳೆವಿದ್ಯಾರ್ಥಿ ಶಿಕ್ಷಕರಿಗೆ ಅಭಿನಂದನೆ

Update: 2019-09-15 12:29 GMT

ಉಡುಪಿ, ಸೆ.15: ಸುವರ್ಣ ಸಂಭ್ರಮದಲ್ಲಿರುವ ನಿಟ್ಟೂರು ಪ್ರೌಢಶಾಲೆ ಯಲ್ಲಿ ವಿದ್ಯಾರ್ಜನೆಗೈದು ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಸುಮಾರು 60ಕ್ಕೂ ಹೆಚ್ಚು ಹಳೆ ವಿದ್ಯಾರ್ಥಿ ಶಿಕ್ಷಕರನ್ನು ಶಾಲಾ ಹಳೆವಿದ್ಯಾರ್ಥಿ ಸಂಘದ ವತಿಯಿಂದ ಅಭಿನಂದಿಸುವ ಕಾರ್ಯಕ್ರಮವನ್ನು ರವಿವಾರ ಶಾಲಾ ರಜತ ಸಭಾಭವನದಲ್ಲಿ ಆಯೋಜಿಸಲಾಗಿತ್ತು.

ಅಧ್ಯಕ್ಷತೆಯನ್ನು ಉಡುಪಿ ಪೂರ್ಣಪ್ರಜ್ಞ ಕಾಲೇಜೀನ ನಿವೃತ್ತ ಉಪನ್ಯಾಸಕ ಡಾ.ಬಿ.ಎಂ.ಸೋಮಯಾಜಿ ಮಾತನಾಡಿ, ಶಿಕ್ಷಕ ವೃತ್ತಿ ಪವಿತ್ರವಾದದ್ದು, ಸದಾ ಕಲಿಯುವ ತುಡಿತ ಮತ್ತು ವಿದ್ಯಾರ್ಥಿ ಪ್ರೀತಿ ಶಿಕ್ಷಕರಲ್ಲಿ ಇರಲೇ ಬೇಕಾದ ಮೌಲ್ಯವಾಗಿದ್ದು, ಶಾಲೆ ಮತ್ತು ಹಳೆವಿದ್ಯಾರ್ಥಿಗಳ ನಡುವೆ ಸಂಬಂಧ ಬೆಸೆಯುವ ಈ ಕಾರ್ಯ್ರಮ ಆದರ್ಶಪ್ರಾಯವಾಗಿದೆ ಎಂದರು.

ಹಳೆವಿದ್ಯಾರ್ಥಿ ಶಿಕ್ಷಕರ ಪರವಾಗಿ ನೀರಧ ಶೆಟ್ಟಿ, ದಿವ್ಯಾ ಭಟ್, ಜಗದೀಶ ಆಚಾರ್ಯ, ಲಕ್ಷ್ಮೀ ಆಚಾರ್ಯ, ಪ್ರಕಾಶ್ ಜೋಗಿ, ವಾದಿ ರಾಜ್ ತಂತ್ರಿ, ನಜಿರಾಭಿ, ಗೀತಾ, ಪಲ್ಲವಿ ಶೇಟ್ ಮನದಾಳದ ಭಾವನೆಗಳನ್ನು ಹಂಚಿ ಕೊಂಡರು. ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಕೆ.ಎ.ಪಿ. ಭಟ್, ವೇಣುಗೋಪಾಲ ಆಚಾರ್ಯ, ಎಸ್.ವಿ.ಭಟ್, ಸುಬ್ರಹ್ಮಣ್ಯ ಭಟ್, ಭಾಸ್ಕರ ಡಿ.ಸುವರ್ಣ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ನಾಗಾನಂದ ವಾ ಸುದೇವ ಆಚಾರ್ಯ ಮಾತನಾಡಿದರು.

ಈ ಸಂದರ್ಭದಲ್ಲಿ ಶಾಲೆಯಲ್ಲಿ ಸುಮಾರು 10 ವರ್ಷಗಳ ಕಾಲ ಗೌರವ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಮಂಜುನಾಥ ಇವರನ್ನು ಸನ್ಮಾನಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯ ಮುರಲಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯೋಗೀಶ್ಚಂದ್ರಾಧರ್ ಸ್ವಾಗತಿಸಿದರು. ಪ್ರದೀಪ್ ಜೋಗಿ ಕಾರ್ಯಕ್ರಮ ನಿರೂಪಿಸಿದರು. ಶಶಿಪ್ರಭಾ ಕಾರಂತ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News